371 (ಜೆ) ಸಮರ್ಪಕ ಅನುಷ್ಠಾನಕ್ಕಾಗಿ ಬೃಹತ್ ಹೋರಾಟ ಹಮ್ಮಿಕೊಳ್ಳಲು ಕನಕಗಿರಿಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸಾಹಿತಿ ಅಲ್ಲಾಗಿರಿರಾಜ ಮಾತನಾಡಿದರು. ಪ್ರಭು ಉಪನಾಳ, ದುರ್ಗಾದಾಸ್ ಯಾದವ್, ಶರಣಪ್ಪ ಭತ್ತದ್ ಇತರರಿದ್ದರು.  
ಜಿಲ್ಲೆ

371 (ಜೆ) ಅಮರ್ಪಕ ಅನುಷ್ಠಾನ ಅಗತ್ಯ

ಕನಕಗಿರಿ: ಹೈದರಾಬಾದ್ ಕರ್ನಾಟಕ (ಕಕ) ಜನರ ಹಲವು ದಶಕಗಳ ಹೋರಾಟದ ಫಲವಾಗಿ ನಮಗೆ 371 (ಜೆ) ಸೌಲಭ್ಯ ದೊರೆತಿದ್ದು, ಸಮರ್ಪಕವಾಗಿ ಅನುಷ್ಠಾನಗೊಂಡು ನಮ್ಮ ಮಕ್ಕಳಿಗೆ ಸದ್ಬಳಕೆಯಾಗಬೇಕು ಎಂದು ಗಜಲ್ ಸಾಹಿತಿ ಅಲ್ಲಾಗಿರಿರಾಜ ಹೇಳಿದರು.

ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಕಕ ಭಾಗಕ್ಕೆ ನೀಡಿರುವ 371 (ಜೆ) ಸೌಲಭ್ಯ ಸಮರ್ಪಕ ಜಾರಿಗಾಗಿ ಆಗ್ರಹಿಸಿ ಬೃಹತ್ ಪ್ರಮಾಣದ ಪ್ರತಿಭಟನೆ ನಿಮಿತ್ತ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು.

ನಮ್ಮವರ ಹೋರಾಟದ ಫಲವಾಗಿ 371 (ಜೆ) ಕಲಂ ಬೆವರಿನ ಭಿಕ್ಷೆಯಾಗಿ ನಮಗೆ ದೊರೆತಿದೆ. ಹಲವು ದಶಕಗಳ ಹೋರಾಟಕ್ಕೆ ಸಂದ ಜಯವಾಗಿದೆ. ಮೀಸಲಾತಿ ಕೇವಲ ಜಾರಿಯಾದರೆ ಸಾಲದು. ನಾನಾ ಕ್ಷೇತ್ರಗಳಲ್ಲಿ ಹಿಂದುಳಿದ ನಮ್ಮ ಭಾಗದ ಮಕ್ಕಳಿಗೆ ದೊರೆತಿರುವ ಮೀಸಲಾತಿ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಎಂದರು.

ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಮೇಶ ನಾಯಕ ಮಾತನಾಡಿ, ಪ್ರಾದೇಶಿಕ ಅಸಮಾನತೆ ಹೋಗಲಾಡಿಸಿ ಶೈಕ್ಷಣಿಕ, ಔದ್ಯೋಗಿಕ ಕೊರತೆ ನೀಗಿಸಲು ಮೀಸಲಾತಿ ಜಾರಿಗೆ ತರಲಾಗಿದೆ. ಇದನ್ನು ರದ್ದುಗೊಳಿಸಿದರೆ ಈ ಭಾಗದ ಮಕ್ಕಳ ಭವಿಷ್ಯ ನಶಿಸಿ ಹೋಗುತ್ತದೆ. ಪಕ್ಷ, ಬೇಧ ಮರೆತು ಪ್ರತಿಯೊಬ್ಬರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ವಿರುಪಣ್ಣ ಕಲ್ಲೂರು, ಕಸಾಪ ತಾಲೂಕು ಘಟಕದ ಅಧ್ಯಕ್ಷ ಮೆಹಬೂಬ್ ಹುಸೇನ್, ಪ್ರಮುಖರಾದ ಮಹಾಂತೇಶ ಸಜ್ಜನ್, ವಾಗೇಶ ಹಿರೇಮಠ, ದುರ್ಗಾದಾಸ ಯಾದವ್, ನೀಲಕಂಠ ಬಡಿಗೇರ ಮಾತನಾಡಿದರು.ಗಿನಕಾಯಿ, ಶರಣಪ್ಪ ಭತ್ತದ್, ಹನುಮೇಶ ಯಲಬುರ್ಗಿ, ಮೃತ್ಯುಂಜಯಸ್ವಾಮಿ, ಮಲ್ಲಿಕಾರ್ಜುನಗೌಡ, ಕೆ.ಎಚ್. ಕುಲಕರ್ಣಿ ಇತರರು ಇದ್ದರು.