ಕನಕಗಿರಿ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 200 ಯುನಿಟ್ ವಿದ್ಯುತ್ ಉಚಿತ ಹೇಳಿಕೆಯನ್ನಿಟ್ಟುಕೊಂಡು, ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆಯುತ್ತಿದ್ದಂತೆ ನಾನಾ ಕಡೆಗಳಲ್ಲಿ ಕರೆಂಟ್ ಬಿಲ್ ಕಟ್ಟಲ್ಲ ಎನ್ನುವ ಜನರ ಮಾತುಗಳಿಂದ ರೋಸಿಹೋಗಿರುವ ರಾಜ್ಯದ ವಿದ್ಯುತ್ ಕಂಪನಿಗಳ ಸಿಬ್ಬಂದಿ, ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ 5 ಭರವಸೆಗಳನ್ನು ನೀಡಿದ್ದು, ಅದರಂತೆ ಗ್ಯಾರಂಟಿ ಕಾರ್ಡ್‌ಗಳನ್ನು ಮನೆ ಮನೆಗೆ ಹಂಚಿಕೆ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿ ಅಧಿಕಾರದ ಚುಕ್ಕಾಣಿ ಸಹ ಹಿಡಿದಿದೆ.
ಕೈ ಪಕ್ಷ ನೀಡಿದ ಭರವಸೆಗಳಲ್ಲಿ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಒಂದಾಗಿದ್ದು, ಈ ಗ್ಯಾರಂಟಿಗಳ ಜಾರಿ ಬಗ್ಗೆ ಅನುಮಾನ ಹಾಗೂ ಗೊಂದಲಗಳ ನಡುವೆ ರಾಜ್ಯದ ನಾನಾ ಕಡೆಗಳಲ್ಲಿ ಕರೆಂಟ್ ಬಿಲ್ ಸಂಗ್ರಹಕ್ಕೆಂದು ತೆರಳುತ್ತಿರುವ ವಿದ್ಯುತ್ ಕಂಪನಿ ಸಿಬ್ಬಂದಿ, ನಾಗರಿಕರಿಂದ ಮುಜುಗರಕ್ಕೆ ಒಳಗಾಗಿದ್ದಾರೆ.
ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ರೀತಿಯ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿಲ್ ಕಲೆಕ್ಟರ್‌ಗಳು ಗ್ರಾಹಕರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರೂ ಜನ ಕಿವಿಗೊಡುತ್ತಿಲ್ಲ. ಇದರಿಂದ ಅಧಿಕಾರಿಗಳು, ಸಿಬ್ಬಂದಿ ರೋಸಿ ಹೋಗಿದ್ದಾರೆ.
ಅದಕ್ಕಾಗಿ ತಮ್ಮ ಸಾಮಾಜಿಕ ಜಾಲತಾಣಗಳ ಸ್ಟೇಟಸ್‌ನಲ್ಲಿ ವಿದ್ಯುತ್ ಉಚಿತದ ಬಗ್ಗೆ ಇನ್ನು ಆದೇಶ ಬಂದಿಲ್ಲ. ಬಂದರೂ ಅದು ಬಾಕಿ ಇರುವ ಬಿಲ್‌ಗೆ ಅನ್ವಯಿಸುವುದಿಲ್ಲ. ಆದ್ದರಿಂದ ಗ್ರಾಹಕರು ಬಿಲ್ ಪಾವತಿಸುವಂತೆ ಕೋರಿ ಸಂದೇಶವನ್ನಿಟ್ಟುಕೊಂಡು ಜನರಿಗೆ ತಿಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ವಿದ್ಯುತ್ ಫ್ರೀ ನೀಡಬೇಕೆಂದು ನಮಗೆ ಆದೇಶ ಬಂದಿಲ್ಲ. ಆದೇಶ ಬರುವವರೆಗೂ ಎಂದಿನಂತೆ ವಿದ್ಯುತ್ ಬಿಲ್ ಪಾವತಿಸುವುದು ಜನರ ಕರ್ತವ್ಯ. ಆದೇಶದ ಬಳಿಕ ನಿಯಮಗಳನುಸಾರ ಕ್ರಮ ಕೈಗೊಳ್ಳಲಾಗುವುದು. ಜನತೆ ಆದೇಶಕ್ಕೂ ಮುಂಚೆಯೇ ಬಿಲ್ ನೀಡುವುದಿಲ್ಲ ಎನ್ನುವುದು ಅಸಮಂಜಸ. ಅದಕ್ಕಾಗಿ ಈ ರೀತಿ ಸ್ಟೇಟಸ್ ಮೂಲಕ ಜನರ ಗಮನ ಸೆಳೆಯುತ್ತಿದ್ದೇವೆ.ಆನಂದ ಜೆಸ್ಕಾಂ ಶಾಖಾಧಿಕಾರಿ, ಕನಕಗಿರಿ