ಕನಕಗಿರಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಲದಲ್ಲಿ ಆರಂಭವಾದ ಕನಕಗಿರಿ ಉತ್ಸವವನ್ನು ಕರೊನಾ ಕಾರಣಕ್ಕೆ ಮಾಡಲಾಗಲಿಲ್ಲ. ಈ ಬಾರಿ ಖಂಡಿತವಾಗಿ ಆಚರಿಸಲಾಗುವುದು ಎಂದು ಶಾಸಕ ಬಸವರಾಜ ದಢೇಸುಗೂರು ಭರವಸೆ ನೀಡಿದರು
ಶಿವರಾತ್ರಿ ಪ್ರಯುಕ್ತ ಪಟ್ಟಣದ ಕನಕಾಚಲ ದೇವಸ್ಥಾನದ ವೇದಿಕೆಯಲ್ಲಿ ಶಾಸಕ ದಢೇಸುಗೂರು ಅಭಿಮಾನ ಬಳಗ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನಕಗಿರಿ ಉತ್ಸವ ಆಚರಣೆಗೆ ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅನುದಾನ ಬಿಡುಗಡೆ ಆಗಿತ್ತು. ಆದರೆ, ಕರೊನಾ ಕಾರಣದಿಂದ ಮಂಜೂರಾದ ಹಣ ಹಿಂಪಡೆಯಲಾಯಿತು. ಇದೀಗ ಉತ್ಸವ ಆಚರಣೆಗೆ ಜಿಲ್ಲಾಡಳಿತದ ಮೂಲಕ ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಕೋರಿ ಸಿಎಂಗೆ ಪ್ರಸ್ತಾವನೆ ನೀಡಲಾಗಿದೆ. ಸಂಸದ ಸಂಗಣ್ಣ ಕರಡಿ ಜತೆ ಭೇಟಿ ನೀಡಿ ಸಿಎಂ ಜತೆ ಚರ್ಚಿಸಿದ್ದು, ಒಂದು ಕೋಟಿ ರೂ. ಮಂಜೂರು ಮಾಡುವ ಭರವಸೆಯಿದೆ. ಮುಂದಿನ ತಿಂಗಳ ಜಾತ್ರೆಯೊಳಗೆ ಉತ್ಸವ ಆಚರಣೆ ಮಾಡಲಾಗುವುದು ಎಂದ ಅವರು, ಹಾಲಿ ಶಾಸಕರಿಂದ ಉತ್ಸವ ಮಾಡಲಾಗಲ್ಲ ಎಂದು ನಮ್ಮ ಸ್ನೇಹಿತರು ಹೇಳುತ್ತಿದ್ದಾರೆ. ಅವರಿಂದಲೇ ಪೂಜೆ ಸಲ್ಲಿಸಿ ಉತ್ಸವ ಆಚರಣೆ ಮಾಡಲಾಗುವುದು ಎಂದು ಪರೋಕ್ಷವಾಗಿ ಶಿವರಾಜ ತಂಗಡಗಿ ವಿರುದ್ಧ ಹರಿಹಾಯ್ದರು.
ಪ್ರಮುಖರಾದ ಅಶ್ವಿನಿ ದೇಸಾಯಿ, ಮಹಾಂತೇಶ ಸಜ್ಜನ್, ಸಣ್ಣ ಕನಕಪ್ಪ, ಚನ್ನಪ್ಪ ತೆಗ್ಗಿನಮನಿ, ರವಿ ಭಜಂತ್ರಿ, ಹನುಮಂತ ಬಸರಿಗಿಡ, ಹುಲಿಗೆಮ್ಮ ನಾಯಕ, ಶರಣಪ್ಪ ಬಾವಿಕಟ್ಟಿ, ಹರೀಶ್ ಬಂಕಾಪುರ ಇತರರಿದ್ದರು.