ಮಧುಸೂದನ ಎಚ್.ಮಾದಿನಾಳ
ಕನಕಗಿರಿ: ತಾಲೂಕಿನ ಹಲವು ರೈತರ ಜಮೀನುಗಳ ಪಹಣಿಯ ಕಾಲಂ 11ರಲ್ಲಿ ವಕ್ಫ್ ಆಸ್ತಿ ಪರಭಾರೆ ನಿಷೇಧಿಸಿದೆ ಎಂದು ಇಂದೀಕರಣವಾದ ನಡುವೆಯೇ ಹಲವು ದಶಕಗಳಿಂದ ವೀರಶೈವ ಲಿಂಗಾಯತ ಸಮಾಜದವರು ಶವ ಸಂಸ್ಕಾರ ಮಾಡುವ ಇಲ್ಲಿನ ಪ್ರವಾಸಿ ಮಂದಿರದ ಬಳಿಯ ಆಸ್ತಿಯ ಪಹಣಿಯಲ್ಲಿ ಮುಸ್ಲಿಂ ಖಬರಸ್ಥಾನ್, ವಕ್ಫ್ ಆಸ್ತಿ ಪರಭಾರೆ ಎಂದು ನಮೂದಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಈಗಾಗಲೇ ತಾಲೂಕಿನ ಹುಲಿಹೈದರ ಹೋಬಳಿಯ ಹನುಮನಾಳದ ಸರ್ವೇ ನಂ 48 ಹಾಗೂ ನವಲಿ ಹೋಬಳಿ ನವಲಿ ಗ್ರಾಮದ ಸರ್ವೇ ನಂ.24,45,46,47ರ ರೈತರ ಜಮೀನುಗಳ ಪಹಣಿಯ ಕಾಲಂ 11ರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದು ಈ ಜಮೀನುಗಳ ರೈತರನ್ನು ನಿದ್ದೆಗೆಡಿಸಿದೆ.
ಇದರ ನಡುವೆಯೇ ಪಟ್ಟಣದ ವೀರಶೈವ ಸಮುದಾಯದವರು ಹಲವು ದಶಕಗಳಿಂದ ಶವ ಸಂಸ್ಕಾರ ನಡೆಸುವ ಸರ್ವೇ ನಂ. 362 ರಲ್ಲಿನ 1-13 ಎ-ಗುಂ ಆಸ್ತಿಗೆ ಕಳೆದ 4 ವರ್ಷಗಳ ಹಿಂದೆಯೇ ವಕ್ಫ್‌ನ ಕಣ್ಣು ಬಿದ್ದಿದೆ. ಪಹಣಿಯ ಕಾಲಂ 9ರಲ್ಲಿ 2019-20ರವರೆಗೆ ಸರ್ಕಾರಿ ಖಬರಸ್ಥಾನ ಎಂದಿದ್ದುದ್ದು, ನಂತರ ಮುಸ್ಲಿಂ ಖಬರಸ್ಥಾನ ಸುನ್ನಿ ಎಂದು, ಕಾಲಂ 11ರಲ್ಲಿ ವಕ್ಫ್ ಆಸ್ತಿ ಪರಭಾರೆ ನಿಷೇಧಿಸಿದೆ ಎಂದು ಇಂದೀಕರಣಗೊಂಡಿರುವುದು ವೀರಶೈವ ಸಮುದಾಯದವರನ್ನು ಇದೀಗ ಆತಂಕಕ್ಕೀಡು ಮಾಡಿದೆ.
ಹಿಂದಿನಿಂದಲೂ ಈ ರುದ್ರಭೂಮಿಯ ಪಹಣಿಯಲ್ಲಿ ಸರ್ಕಾರಿ ಖಬರಸ್ಥಾನ ಇದ್ದುದ್ದಕ್ಕೆ ವೀರಶೈವ ಸಮುದಾಯದವರು ಖಬರಸ್ಥಾನ ಬದಲಾಗಿ ವೀರಶೈವ ಸಮುದಾಯದ ರುದ್ರಭೂಮಿ ಎಂದು ಬದಲಾಯಿಸುವಂತೆ 2021ರ ಜುಲೈನಲ್ಲಿ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿದ್ದರು. ಇವರ ಮನವಿಯಂತೆ ಆಗಿನ ಕಂದಾಯ ನಿರೀಕ್ಷಕರಿಂದ ಪರಿಶೀಲನೆ ನಡೆಸಲಾಗಿತ್ತು. ಈ ಆಸ್ತಿಯಲ್ಲಿ ವೀರಶೈವ ಸಮುದಾಯದವರು ಶವಸಂಸ್ಕಾರ ಮಾಡುತ್ತಿದ್ದಾರೆ. ಇದಕ್ಕೆ ಮುಸ್ಲಿಂ ಸಮುದಾಯದವರ ತಕರಾರು, ಆಕ್ಷೇಪಣೆಗಳು ಇರುವುದಿಲ್ಲ. 1963ರ ಕೈ ಬರಹದಲ್ಲಿ ಪಹಣಿಯಲ್ಲಿ ಸರ್ಕಾರಿ ಖಬರಸ್ಥಾನ ಎಂದಿದ್ದು, ಗಣಕೀಕೃತ ಪಹಣಿಯಲ್ಲಿ ಮುಸ್ಲಿಂ ಖಬರಸ್ಥಾನ ಎಂದಿರುತ್ತದೆ. ಗ್ರಾಮದಲ್ಲಿ 16,938 ಜನಸಂಖ್ಯೆಯಿದೆ. ಹಿಂದುಗಳ ಇತರೇ 5 ಜನಾಂಗದವರಿಗೆ 154ರಲ್ಲಿ 4-14 ಎ-ಗುಂ ಜಮೀನಿದ್ದು, ಇನ್ನೀತರ ಸ.ನಂ. ಪಹಣಿಯಲ್ಲಿ ಖಬರಸ್ಥಾನ ಎಂದು ಇದೆ ಎನ್ನುವ ವರದಿಯನ್ನು ತಹಸೀಲ್ದಾರ್‌ಗೆ ಕಂದಾಯ ನಿರೀಕ್ಷಕರು ನೀಡಿದ್ದರು. ಆದರೆ, ಇದೇ ವರದಿಯನ್ವಯ ತಹಸೀಲ್ದಾರ್‌ರು 2022ರ ಜ.7ರಂದು ಕಂದಾಯ ನಿರೀಕ್ಷಕರಿಗೆ 362ರ ಆಸ್ತಿಯನ್ನು ವೀರಶೈವ ರುದ್ರಭೂಮಿಗೆ ಕಾಯ್ದಿರಿಸಿರುವ ಕುರಿತು ಮಾರ್ಗದರ್ಶನ ಹಾಗೂ ಆದೇಶಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಆದರೆ, ತಹಸೀಲ್ದಾರ್ ಪ್ರಸ್ತಾವನೆಗೆ ಅನುಮೋದನೆ ದೊರೆತಿಲ್ಲ.
ಈ ಹಿಂದೆ ಈ ಆಸ್ತಿಗೆ ತಂತಿ ಬೇಲಿ ನಿರ್ಮಿಸಿ ಅಭಿವೃದ್ಧಿಪಡಿಸಿದ್ದ ಸ್ಥಳೀಯ ಆಡಳಿತ ಅದಾದ ಬಳಿಕ ಕೆಲ ತಿಂಗಳ ಹಿಂದೆಯಷ್ಟೇ ತಂತಿ ಬೆಲಿ ತೆಗೆದು ಕಾಂಪೌಂಡ್ ನಿರ್ಮಿಸಿದೆ. ಆವರಣ ಗೋಡೆ ನಿರ್ಮಿಸಿದ ಬಳಿಕ ಚೆನ್ನಾಗಿ ಆಗಿದೆಯೆಂದು ಹೇಳಿಕೊಳ್ಳುತ್ತಿರುವಾಗಲೇ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು ಇಂದೀಕರಣಗೊಂಡಿರುವುದು ಸಮುದಾಯದವರಿಗೆ ದಾರಿ ತೋಚದಂತಾಗಿದೆ.
ರಜಾಕಾರರು ಸ್ಮಶಾನವನ್ನು ಖಬರಸ್ಥಾನ ಎಂದು ಕರೆಯುತ್ತಿದ್ದರು. ಅದರಂತೆ ವೀರಶೈವರು ಶವ ಸಂಸ್ಕಾರ ಮಾಡುವ ಈ ಭೂಮಿಯನ್ನು ಖಬರಸ್ಥಾನ ಎಂದು ಬರೆದಿರಬಹುದು. ಆದರೆ, 362 ಸ.ನಂ. ಆಸ್ತಿ ಇತ್ತೀಚೆಗೆ ಮುಸ್ಲಿಂ ಖಬರಸ್ಥಾನ ಎಂದು ನಮೂದಾದಾಗ ಹೆಸರು ಬದಲಾಯಿಸಲು ಪತ್ರ ಬರೆದಿದ್ದೆವು. ಇದೀಗ ವಕ್ಫ್ ಎಂದು ಇಂದೀಕರಣವಾಗಿರುವುದು ಏನು ತೋಚುತ್ತಿಲ್ಲವಾಗಿದೆ. | ವಾಗೇಶ ಹಿರೇಮಠ ವೀರಶೈವ ಸಮಾಜದ ಮುಖಂಡ