ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ರಾಜಶೇಖರ ಹಿಟ್ನಾಳಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಗುರುವಾರ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಗದ್ದಿ, ಹೋಬಳಿ ಘಟಕದ ಅಧ್ಯಕ್ಷ ಸಣ್ಣ ಶೇಖರಪ್ಪ ಗದ್ದಿ, ಮುಖಂಡ ಹನುಮಂತಪ್ಪ ಬೇವಿನಗಿಡ ಇತರರಿದ್ದರು.  
ಜಿಲ್ಲೆ

ಹತ್ತಿ ಬೀಜೋತ್ಪಾದಕರ ಸಮಸ್ಯೆ ಪರಿಹರಿಸಿ, ಸಂಸದ ರಾಜಶೇಖರ ಹಿಟ್ನಾಳಗೆ ರೈತ ಸಂಘ ಮನವಿ

ಕನಕಗಿರಿ: ಹತ್ತಿ ಬೀಜೋತ್ಪಾದನೆ ಕಂಪನಿ ಹಾಗೂ ಸಂಘಟಕರು ಬೆಳೆಗಾರರಿಗೆ ಮೋಸ ಮಾಡಲು ಮುಂದಾಗಿದ್ದು, ಇದರಿಂದ ರೈತರನ್ನು ಪಾರು ಮಾಡುವಂತೆ ಆಗ್ರಹಿಸಿ ತಾಲೂಕಿನ ಹುಲಿಹೈದರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ರಾಜಶೇಖರ ಹಿಟ್ನಾಳಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಗದ್ದಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಹತ್ತಿ ಬೀಜೋತ್ಪಾದನಾ ಕಂಪನಿಗಳ ಮಾಲೀಕರು, ಸಂಘಟಕರು ಹಾಗೂ ಮೇಲ್ವಿಚಾರಕರಿಂದ ಬೆಳೆಗಾರರಿಗೆ ಮೋಸವಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರು ಈ ವಿಷಯ ಕುರಿತು. ಜೂ.30ರಂದು ಸಭೆ ನಡೆಸಿ, ಹತ್ತಿ ಬೀಜೋತ್ಪಾದನೆ ಕಂಪನಿಯವರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಕಂಪನಿ ಮತ್ತು ಸಂಘಟಕರು ರೈತರೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.

ಕನಕಗಿರಿ ತಾಲೂಕಿನ ಲಾಯದುಣಸಿ, ಬಸರಿಹಾಳ, ಗೌರಿಪುರ, ರಾಂಪುರ, ಕರಡೋಣ, ಸಿರವಾರ ಸೇರಿ ಒಟ್ಟು 13 ಕೆರೆಗಳಿಗೆ ಸಣ್ಣ ನೀರಾವರಿ ಇಲಾಖೆಯಿಂದ ನೀರು ತುಂಬಿಸುವ ಯೋಜನೆ ಪ್ರಕ್ರಿಯೆ ಪ್ರಾರಂಭವಾಗದಿರುವುದು ಈ ಭಾಗದ ರೈತರ ದುರ್ದೈವ. ಕೆರೆಗಳು ತುಂಬಿದಾಗ ಮಾತ್ರ ನೀರಾವರಿ ಕೃಷಿಗೆ ಸಹಕಾರಿಯಾಗಲಿದೆ. ಆದ್ದರಿಂದ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸಲು ಕ್ರಮ ವಹಿಸಬೇಕು. ಹುಲಿಹೈದರದಿಂದ ವಿರುಪಾಪುರಕ್ಕೆ ತೆರಳುವ ರಸ್ತೆಗೆ ಸೇತುವೆ, ಹುಲಿಹೈದರ ಗ್ರಾಮದ ನಾನಾ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಿಸಲು ಒತ್ತಾಯಿಸಿದರು.