ಕನಕಗಿರಿ: ಬಡತನದಲ್ಲಿ ಜೀವನ ಸಾಗಿಸುತ್ತಿರುವ ಈ ಭಾಗದ ಜನರಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಲಿಂ. ರುದ್ರಮುನಿ ಮಹಾಸ್ವಾಮಿಗಳು 1987ರಲ್ಲೇ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ ಎಂದು ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ. ಚನ್ನಮಲ್ಲ ಸ್ವಾಮೀಜಿ ಹೇಳಿದರು.
ಇಲ್ಲಿನ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದಲ್ಲಿ ಬುಧವಾರ ನಡೆದ ಮಠದ 27ನೇ ಪೀಠಾಧಿಪತಿ ಲಿಂ. ರುದ್ರಮುನಿ ಮಹಾಸ್ವಾಮಿಗಳ 20ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿದರು.
ಹೈದರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶ. ಅದರಲ್ಲೂ ಕನಕಗಿರಿ ಭಾಗ ಮಳೆಯಾಶ್ರಿತ ಪ್ರದೇಶವಾಗಿದ್ದು, ಇಲ್ಲಿನ ಜನರು ಮಳೆಯನ್ನೇ ನಂಬಿ ಕೃಷಿ ಮಾಡಿ ಜೀವನ ಸಾಗಿಸುವುದು ಕಷ್ಟಕರವಾಗಿತ್ತು. ಜನತೆಯನ್ನು ಜಾಗೃತಿಗೊಳಿಸಲು ಶಿಕ್ಷಣವೇ ಮದ್ದು ಎಂದು ಅರಿತಿದ್ದ ಶ್ರೀಗಳು, ಮಕ್ಕಳ ಶಿಕ್ಷಣದ ಕಡೆಗೆ ಗಮನಹರಿಸುವುದರ ಸಲುವಾಗಿ ಶಿಕ್ಷಣ ಸಂಸ್ಥೆಯನ್ನು ತೆರೆದರು.
ಮೊದಲು 1988ರಲ್ಲಿ ಶ್ರೀ ಶಿವಯೋಗಿ ಚನ್ನಮಲ್ಲ ಪ್ರಾಥಮಿಕ ಶಾಲೆ, 1992ರಲ್ಲಿ ಶ್ರೀ ರುದ್ರಸ್ವಾಮಿ ಪ್ರೌಢಶಾಲೆ ಪ್ರಾರಂಭಿಸಿದರು. ಅವರು ಹಚ್ಚಿ ಹೋದ ಸಸಿ ಇಂದಿಗೂ ಚಿಗುರೊಡೆಯುತ್ತಿದೆ. ಶಿಕ್ಷಣ ಪ್ರೇಮಿಗಳಾಗಿದ್ದ ಶ್ರೀಗಳು, ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ಹಲವು ಗ್ರಾಮಗಳಲ್ಲಿ ಶಾಲೆಗಳ ನಿರ್ಮಾಣಕ್ಕೆ ಭೂದಾನ ಮಾಡಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಲಿಂ. ರುದ್ರಮುನಿ ಮಹಾಸ್ವಾಮಿಗಳ ಮೂರ್ತಿಯನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಲಾಯಿತು. ಸೇಡಂನ ಕೊತ್ತಲ ಬಸವೇಶ್ವರ ಮಠದ ಸದಾಶಿವ ಸ್ವಾಮೀಜಿ, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ, ಸೋಮನಾಳದ ರುದ್ರಮುನಿ ಸ್ವಾಮಿ ಹಿರೇಮಠ ಇತರರಿದ್ದರು.