ಕನಕಗಿರಿ: ಕಳೆದ ಆರು ದಶಕ ದಾಂಪತ್ಯ ಜೀವನ ನಡೆಸಿದ ಜೋಡಿಯೊಂದು ಕೆಲವೇ ಗಂಟೆಗಳ ಅಂತರದಲ್ಲಿ ಇಹ ಲೋಕ ತ್ಯಜಿಸಿದೆ. ಪಟ್ಟಣದ ಏಳನೇ ವಾರ್ಡ್ ನಿವಾಸಿ, ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಹಾಗೂ ವೀರಶೈವ ಸಮುದಾಯದ ಹಿರಿಯ ಕೆ.ಮಹಾಬಳೇಶ್ವರ ಸ್ವಾಮಿ (85) ಮತ್ತು ಪತ್ನಿ ಪ್ರಭಾವತಿ (77) ಸಾವಿನಲ್ಲೂ ಒಂದಾಗಿರುವ ದಂಪತಿ. ಬುಧವಾರ ರಾತ್ರಿ 12ಕ್ಕೆ ಪ್ರಭಾವತಿ ವಯೋಸಹಜ ಸಾವಿಗೀಡಾದರು. ಪತ್ನಿ ಸಾವಿನ ಸುದ್ದಿ ಕೇಳಿದ ಕೆ.ಮಹಾಬಳೇಶ್ವರ ಸ್ವಾಮಿ ಗುರುವಾರ ಬೆಳಗಿನ ಹೃದಯಾಘಾತದಿಂದ ಮೃತಪಟ್ಟರು. ಮೆರವಣಿಗೆ ಮೂಲಕ ಸಂಜೆ ದಂಪತಿ ಅಂತ್ಯಕ್ರಿಯೆ ಮಾಡಲಾಯಿತು. ದಂಪತಿಗೆ ಮೂವರು ಪುತ್ರರು, ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳೂ, ಅಪಾರ ಬಂಧು ಬಳಗವಿದೆ. ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿತ್ತು.