ಕನಕಗಿರಿ ಪ್ರವಾಸಿ ಮಂದಿರದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ 11ನೇ ಜಿಲ್ಲಾ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು. ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ, ತಾಲೂಕು ಅಧ್ಯಕ್ಷ ಶರಣಪ್ಪ ಮಹಿಪತಿ, ಗೌರವಾಧ್ಯಕ್ಷ ದುರ್ಗಾದಾಸ್ ಯಾದವ್, ಉಪಾಧ್ಯಕ್ಷರಾದ ಗೀತಾ ಪಾಟೀಲ್, ಗೌಸ್ ಪಾಷಾ ಇತರರಿದ್ದರು. 
ಜಿಲ್ಲೆ

ಯುವಕರು ಸಾಹಿತ್ಯಕ್ಕೆ ಒಲವು ತೋರಲಿ

ಕನಕಗಿರಿ: ಕೊಪ್ಪಳದ ಸಾಹಿತ್ಯ ಭವನದಲ್ಲಿ ನ.9ರಂದು ನಡೆಯಲಿರುವ ಜಿಲ್ಲಾ ಮಟ್ಟದ 11ನೇ ಸಮ್ಮೇಳನದಲ್ಲಿ ನೂರು ಕವಿಗಳಿಗೆ ಕವಿತೆ ವಾಚಿಸಲು ಅವಕಾಶ ನೀಡಲಾಗುವುದು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚುಟುಕು ಸಾಹಿತ್ಯ ಪರಿಷತ್ತಿನ 11ನೇ ಜಿಲ್ಲಾ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ, ಕನಕಗಿರಿ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.

ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿರುವ ಚುಟುಕು ಸಾಹಿತ್ಯ ಅರ್ಥಗರ್ಭಿತವಾಗಿದ್ದು, ಯುವಕರು ಹೆಚ್ಚಿನ ಆಸಕ್ತಿ ತೋರುತ್ತಾರೆ. ಕವಿ, ಸಾಹಿತಿ, ಸಂಶೋಧಕರಾಗಲು ಚುಟುಕು ಸಾಹಿತ್ಯ ಅನುಕೂಲವಾಗಿದೆ. 11ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಸಾಹಿತಿ ವೀರಣ್ಣ ವಾಲಿ ಅವರನ್ನು ಆಯ್ಕೆ ಮಾಡಲಾಗಿದೆ. ಆಷಾಢ ಭೂತಿಗಳು, ಮೌನ ನಿನಾದ, ನಮ್ಮ ನೆಲ-ನಮ್ಮ ಜನ, ಲೇಖನ ಮಾಲೆ ಸೇರಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಸಮ್ಮೇಳನದಲ್ಲಿ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದರು.

ಪರಿಷತ್ತಿನ ತಾಲೂಕು ಘಟಕದ ಗೌರವಾಧ್ಯಕ್ಷ ದುರ್ಗಾದಾಸ್ ಯಾದವ್ ಮಾತನಾಡಿ, ಯುವ ಜನತೆ ಟಿವಿ, ಮೊಬೈಲ್‌ಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ ಸಾಹಿತ್ಯದ ಕಡೆ ಒಲವು ಕಡಿಮೆಯಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಯುವ ಸಮೂಹ ಸಾಹಿತ್ಯವನ್ನು ಬೆಳೆಸಬೇಕು. ಕನ್ನಡ ಸಾಹಿತ್ಯಕ್ಕೆ ದೇಶದಲ್ಲಿ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಕೊರಕಿವೆ ಎಂದು ತಿಳಿಸಿದರು.

ತಾಲೂಕು ಘಟಕದ ಪದಾಧಿಕಾರಿಗಳು

ದುರ್ಗದಾಸ್ ಯಾದವ್ ಗೌರವಾಧ್ಯಕ್ಷ, ಶರಣಪ್ಪ ಮಹಿಪತಿ ಅಧ್ಯಕ್ಷ, ಎಂ.ಕೊಟ್ರಬಸಯ್ಯ, ಗೀತಾ ಪಾಟೀಲ್, ಗೌಸ್ ಪಾಷಾ ಉಪಾಧ್ಯಕ್ಷರು, ಹನುಮೇಶ್ ಜನಾದ್ರಿ ಕೋಶಾಧ್ಯಕ್ಷ, ದೀಪಾ ಉಲ್ಲಾಸ್ ಪ್ರಧಾನ ಕಾರ್ಯದರ್ಶಿ, ಆನಂದ್ ರಾವಣಕಿ ತಿಪ್ಪನಾಳ, ಲಕ್ಷ್ಮೀಕಾಂತ್ ವಡಕಿ, ಶ್ರೀನಿವಾಸ್ ಪೂಜಾರ್ ಸಹ ಕಾರ್ಯದರ್ಶಿಗಳು, ವೆಂಕಟೇಶ್ ರೆಡ್ಡಿ, ವೀರೇಶಯ್ಯ ಸ್ವಾಮಿ, ವಿನಯ್ ಪತ್ತಾರ್, ವಡಿಕಿ ಗೌಡ, ಬಸವರಾಜ ಕಲ್ಲೂರ್ ನವಲಿ ಸಂಘಟನಾ ಕಾರ್ಯದರ್ಶಿಗಳು, ಪರ್ವೀನ್, ಮುಮ್ತಾಜ್ ಸಾಂಸ್ಕೃತಿಕ ಮಹಿಳಾ ಪ್ರತಿನಿಧಿಗಳು, ಪ್ರಹ್ಲಾದ್ ರೆಡ್ಡಿ, ಹೊನ್ನೂರ್ ಹುಸೇನ್, ಹುಲಿಗೇಶ್ ಉಪ್ಪಾರ್ ಪತ್ರಿಕಾ/ಮಾಧ್ಯಮ ಪ್ರತಿನಿಧಿಗಳು, ವೆಂಕೋಬ ಪೂಜಾರ, ಪಂಪನಗೌಡ ಬನ್ನಿಮರದ, ಮೆಹಬೂಬ್ ಗಂಗಾವತಿ, ಕಿರಣ್ ಬೊಂದಾಡೆ, ವೀರೇಶ್ ತಳವಾರ ನವಲಿ ಕಾರ್ಯಕಾರಿ ಸಮಿತಿ ಸದಸ್ಯರು, ಶಿವಾನಂದ ಬೆಲ್ಲದ್, ಮಲ್ಕೇಶ್ ಕೋಟೆ, ಹನುಮೇಶ ಮಹಿಪತಿ, ಶೇಖರ ಸಿಂಗ್ ಸೋಮಶೇಖರಯ್ಯ ಸ್ವಾಮಿ, ಮಧುಸೂದನ, ಮಂಜುನಾಥ ಬೈಲ್ ಪತ್ತಾರ್ ಗೌರವ ಸಲಹೆಗಾರರಾಗಿ ಆಯ್ಕೆಯಾದರು.