ಮಳೆ ನೀರು ಕೊಯ್ಲು ತೊಟ್ಟಿಯಲ್ಲಿ ಗ್ರಾಪಂಗೆ ಬೇಡದ ವಸ್ತುಗಳನ್ನು ಹಾಕಿರುವುದು.  
ಜಿಲ್ಲೆ

ಮಳೆ ನೀರು ಕೊಯ್ಲು ಘಟಕ ನಿರುಪಯುಕ್ತ

ಕನಕಗಿರಿ: ಮಳೆಯಾದಾಗ ಛಾವಣಿ ಮೇಲೆ ಬಿದ್ದ ನೀರು ಸಂಗ್ರಹಿಸಿ ಶುದ್ಧೀಕಕರಣ ಮಾಡಿ ಉಪಯೋಗಿಸಲು ತಾಲೂಕಿನ ಬಸರಿಹಾಳ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಿಸಲಾದ ಮಳೆ ನೀರು ಕೊಯ್ಲು ತೊಟ್ಟಿಯು ಕಸ ಸಂಗ್ರಹ ತೊಟ್ಟಿಯಾಗಿ ಮಾರ್ಪಟ್ಟಿದೆ.

ಗ್ರಾಪಂನಲ್ಲಿ ನಿರ್ಮಿಸಲಾದ ಮಳೆ ನೀರು ಕೊಯ್ಲು ಘಟಕವು ಪಂಚಾಯಿತಿ ವ್ಯಾಪ್ತಿಯ ಜನರಿಗೆ ಮಾದರಿಯಾಗುವ ಬದಲು ಲಕ್ಷಾಂತರ ರೂ. ಅನುದಾನ ಪೋಲು ಮಾಡಿ ನಿರುಪಯುಕ್ತವಾಗಿದೆ. 2018ರಲ್ಲಿ ನಿರ್ಮಾಣಗೊಂಡ ಗ್ರಾಮದ ರಾಜೀವ್ ಗಾಂಧಿ ಸೇವಾ ಕೇಂದ್ರ (ಗ್ರಾಪಂ) ಕಟ್ಟಡದ ಛಾವಣಿಗೆ 2021-22ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ 1.4 ಲಕ್ಷ ರೂ. ವೆಚ್ಚದಲ್ಲಿ ಮಳೆ ನೀರು ಕೊಯ್ಲು ಕಾಮಗಾರಿ ನಿರ್ವಹಿಸಲಾಗಿದೆ.

ಮಳೆಗಾಲದಲ್ಲಿ ಬೀಳುವ ನೀರು ಪೋಲಾಗುವುದನ್ನು ತಡೆಯಲು ಕಟ್ಟಡದ ಛಾವಣಿಯಿಂದ ನೀರು ಸಂಗ್ರಹಿಸಲು ಕಟ್ಟಿರುವ ತೊಟ್ಟಿಗೆ ಪೈಪ್ ಸಂಪರ್ಕ ಕಲ್ಪಿಸಲಾಗಿದೆ. ಈ ತೊಟ್ಟಿಗೆ ಬೀಳುವ ನೀರು ಶುದ್ಧೀಕರಣಗೊಂಡು ಸಂಪ್‌ಗೆ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ಪಂಪ್ ಮೂಲಕ ಸಿಂಟೆಕ್ಸ್‌ಗೆ ನೀರು ಏರಿಸಿ ನಿತ್ಯ ಬಳಕೆಗೆ ವ್ಯವಸ್ಥೆ ಮಾಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕಿದ್ದ ಪಂಚಾಯಿತಿ, ನೀರು ಸಂಗ್ರಹಕ್ಕೆ ಇದ್ದ ತೊಟ್ಟಿಯಲ್ಲಿ ಅನುಪಯುಕ್ತ ವಸ್ತುಗಳನ್ನು ಸುರಿದು ಸರ್ಕಾರದ ಅನುದಾನ ಪೋಲು ಮಾಡಿದೆ. ತೊಟ್ಟಿಯಲ್ಲಿ ಮಳೆ ನೀರಿನ ಬದಲು ಚಪ್ಪಲಿ, ಧ್ವಜಾರೋಹಣಕ್ಕೆ ಬಳಸಿದ ಅಲಂಕಾರಿಕ ವಸ್ತುಗಳು, ಕಲ್ಲು, ಮಣ್ಣನ್ನು ಹಾಕಲಾಗಿದೆ. ಸಂಪ್‌ಗೆ ಮುಚ್ಚುವ ಕ್ಯಾಪ್ ಸಹ ತುಕ್ಕು ಹಿಡಿದಿದ್ದು, ಸೂಕ್ತ ರಕ್ಷಣೆ ಸಹ ಇಲ್ಲದಾಗಿದೆ. ಮಕ್ಕಳು ಆಡವಾಡುತ್ತಾ ತೆರೆದ ಸಂಪಿನಲ್ಲಿ ಬಿದ್ದು ಅನಾಹುತ ಆಗುವ ಮೊದಲು ರಕ್ಷಣಾ ವ್ಯವಸ್ಥೆ ಮಾಡಬೇಕಿದೆ.

ಮಳೆ ನೀರು ಕೊಯ್ಲು ಕಾಮಗಾರಿ ಮುಗಿದಾಗಿನಿಂದಲೂ ಇದೇ ಪರಿಸ್ಥಿತಿ ಇದೆ. ಈ ಲಭ್ಯವಿದ್ದರೆ ಶೌಚಗೃಹ, ಗಿಡ ಸೇರಿ ಇತರ ಕಾರ್ಯಗಳಿಗೆ ಬಳಸಬಹುದಿತ್ತು. ಆದರೆ, ಗ್ರಾಪಂನಲ್ಲೇ ಈ ಯೋಜನೆ ಹಳ್ಳ ಹಿಡಿದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ಕಿಟಕಿಗಳಿಗಿಲ್ಲ ಗಾಜು: ಪಂಚಾಯಿತಿಯಲ್ಲಿ ಗಾಳಿ-ಬೆಳಕಿಗಾಗಿ ನಿರ್ಮಿಸಿರುವ ಕಿಟಕಿಗಳಿಗೆ ಗಾಜಿನ ವ್ಯವಸ್ಥೆ ಇಲ್ಲವಾದ್ದರಿಂದ ಫ್ಲೆಕ್ಸ್‌ಗಳಿಂದ ಮುಚ್ಚಲಾಗಿದೆ. ಕಟ್ಟಡ ನಿರ್ಮಿಸಿದವರು ಅರೆಬರೆ ಕಾಮಗಾರಿ ಮಾಡಿದ್ದಾರೆನ್ನಲಾಗಿದೆ.

ಹೊಸ ಕಟ್ಟಡವಿರುವ ಎಲ್ಲ ಗ್ರಾಪಂಗಳಲ್ಲೂ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಆದರೆ ಬಸರಿಹಾಳ ಗ್ರಾಮ ಪಂಚಾಯಿತಿಯ ಮಳೆ ಕೊಯ್ಲು ತೊಟ್ಟಿಯಲ್ಲಿ ಕಸ ಸಂಗ್ರಹವಾಗಿರುವುದನ್ನು ಪಿಡಿಒ ಜತೆ ಮಾತನಾಡಿ ಸರಿಪಡಿಸಿ ಬಳಕೆ ಮಾಡಲು ಸೂಚಿಸಲಾಗುವುದು.

ರಾಜಶೇಖರ ಕೆ., ತಾಪಂ ಇಒ ಕನಕಗಿರಿ