ಕನಕಗಿರಿ ತಾಲೂಕು ಬಂಕಾಪುರ ಗ್ರಾಮದ ಸ.ಉ.ಹಿ.ಪ್ರಾ.ಶಾಲೆ ಮೈದಾನದಲ್ಲಿ ಮಕ್ಕಳು ಕಲಿಯುತ್ತಿರುವುದು. 
ಜಿಲ್ಲೆ

ಬಂಕಾಪುರದಲ್ಲಿ ತಗಡಿನ ಶೆಡ್ನಲ್ಲೇ ಶಾಲಾ ತರಗತಿ ! - ಬಯಲಲ್ಲೇ ಮಕ್ಕಳಿಗೆ ಬೋಧನೆ

ಕನಕಗಿರಿ: ತಾಲೂಕಿನ ಬಂಕಾಪುರ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಗತಿಗಳಿಗನುಸಾರ ಕೊಠಡಿಗಳು ಇಲ್ಲದಿರುವುದರಿಂದ ಮಕ್ಕಳಿಗೆ ಪಾಠ ಕೇಳಲು ಶುದ್ಧ ಕುಡಿವ ನೀರಿನ ಘಟಕಕ್ಕಾಗಿ ನಿರ್ಮಿಸಿದ್ದ ತಗಡಿನ ಶೆಡ್ ಹಾಗೂ ಬಯಲೇ ಗತಿಯಾಗಿದೆ.

ಚಿಕ್ಕ ಮಾದಿನಾಳ ಗ್ರಾಪಂ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ ಬಹುತೇಕ ಕುಟುಂಬಸ್ಥರು ಅಲೆಮಾರಿ ಜನಾಂಗಕ್ಕೆ ಸೇರಿದವರು. ಈ ಮೊದಲು ಹೊಸ ಗ್ರಾಮದಲ್ಲಿ ಶಾಲೆಯಿತ್ತು. ಆ ನಂತರ ಹಳೇ ಊರಿನಲ್ಲಿ ಹೊಸ ಕಟ್ಟಡವಾದ ಮೇಲೆ ಅಲ್ಲಿಗೆ ಈ ಶಾಲೆಯನ್ನು ಸ್ಥಳಾಂತರಿಸಲಾಗಿದೆ.

ಪ್ರಸ್ತುತ ಒಂದರಿಂದ ಎಂಟನೇ ತರಗತಿವರೆಗೆ ಕನ್ನಡ ಹಾಗೂ ಎಲ್‌ಕೆಜಿಯಿಂದ ಎರಡನೇ ತರಗತಿವರೆಗೆ ಆಂಗ್ಲ ಮಾಧ್ಯಮವಿದ್ದು, ಒಟ್ಟು 380 ವಿದ್ಯಾರ್ಥಿಗಳಿದ್ದಾರೆ. ಐವರು ಕಾಯಂ ಶಿಕ್ಷಕರ ಜತೆಗೆ ಏಳು ಜನ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಉತ್ತಮ ಪರಿಸರವನ್ನು ಹೊಂದಿರುವ ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲದಿದ್ದರೂ ಕೊಠಡಿಗಳ ಸಮಸ್ಯೆ ಕಾಡುತ್ತಿದೆ. ಆರು ಕೊಠಡಿಗಳಿರುವ ಈ ಶಾಲೆಯಲ್ಲಿ ಒಂದರಿಂದ ಮೂರನೇ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನಲಿ-ಕಲಿ ಕೊಠಡಿ ಬಳಕೆಯಾದರೆ, ನಾಲ್ಕನೇ ತರಗತಿ ವಿದ್ಯಾರ್ಥಿಗಳನ್ನು ಗಿಡದ ಕೆಳಗೆ ಕೂರಿಸಲಾಗುತ್ತಿದೆ.

ಐದರಿಂದ ರಿಂದ ಎಂಟನೇ ತರಗತಿಯವರಿಗೆ ನಾಲ್ಕು ಕೊಠಡಿಗಳನ್ನು, ಆಂಗ್ಲ ಮಾಧ್ಯಮದ ಒಂದ, ಎರಡನೇ ತರಗತಿಯವರಿಗೆ ಮತ್ತೊಂದು ನಲಿ-ಕಲಿ ಕೊಠಡಿಯನ್ನು ಬಳಸಿಕೊಳ್ಳಲಾಗುತ್ತಿದೆ. ಎರಡು ಕಟ್ಟಡಗಳ ನಡುವೆ ಉಳಿದಿದ್ದ ಜಾಗವನ್ನು ಕೊಠಡಿ ರೂಪಕ್ಕೆ ತಂದು ಕಾರ್ಯಾಲಯ ಮಾಡಿಕೊಳ್ಳಲಾಗಿದೆ.

=====

ಸ್ಥಳಾಂತರದಿಂದ ತೊಂದರೆ

ಹೊಸ ಊರಿನಲ್ಲಿದ್ದ ಶಾಲಾ ಕಟ್ಟಡದ ಎರಡು ಕೊಠಡಿಗಳಲ್ಲೇ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ನಡೆಸಲಾಗುತ್ತಿತ್ತು. ಆದರೆ, ಅಲ್ಲಿಂದ ಹೊಸ ಕಟ್ಟಡಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಓಡಾಟಕ್ಕೆ ಅನಾನುಕೂಲ ಆಗುತ್ತಿದ್ದರಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹಳೇ ಊರಿನ ಹೊಸ ಶಾಲಾ ಕಟ್ಟಡದಲ್ಲಿ ಆ ಎರಡು ತರಗತಿಗಳನ್ನು ನಡೆಸಲಾಗುತ್ತಿದ್ದು, ಕೊಠಡಿಗಳ ಅಭಾವ ಸೃಷ್ಟಿಯಾಗಿದೆ.

=====

ಇಲಾಖೆ ಗಂಭೀರವಾಗಿ ಪರಿಗಣಿಸಲಿ

ಈ ಹಿಂದೆ ಶಾಲಾ ಆವರಣದಲ್ಲಿ ಶುದ್ಧ ಕುಡಿವ ನೀರಿನ ಘಟಕಕ್ಕೆಂದು ಶೆಡ್ ನಿರ್ಮಿಸಲಾಗಿತ್ತು. ಅದೇ ಶೆಡ್‌ನಲ್ಲಿ ಈಗ ಎಲ್‌ಕೆಜಿ-ಯುಕೆಜಿ ವಿದ್ಯಾರ್ಥಿಗಳಿಗೆ ಇಲ್ಲಿ ಪಾಠ ಬೋಧನೆ ಮಾಡಲಾಗುತ್ತಿದೆ. ನಾಚಿಕೆಗೇಡಿನ ಸಂಗತಿಯಾಗಿದೆ. ಶುದ್ಧ ಕುಡಿವ ಘಟಕ ಅಳವಡಿಸಲು ನಿರ್ಮಿಸಿದ್ದ ಶೆಡ್ ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದೇ ತರಗತಿ ಕೊಠಡಿಯಾಗಿ ಮಾರ್ಪಡಿಸಿರುವುದು ದುರಂತವೇ ಸರಿ. ಇಂಥ ಸಮಸ್ಯೆಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎನ್ನುವುದು ಪಾಲಕರ ಒತ್ತಾಸೆ.

=====

ಶಾಲೆಗೆ ಕೊಠಡಿಗಳ ಸಮಸ್ಯೆಯಿದೆ. ಮೇಲಧಿಕಾರಿಗಳು ಕೊಠಡಿಗಳನ್ನು ನೀಡುವ ಭರವಸೆ ನೀಡಿದ್ದಾರೆ. ಕಟ್ಟಡ ನಿರ್ಮಾಣವಾಗಲಿದ್ದು, ಶೀಘ್ರದಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗವುದು.

> ಹನುಮಂತಪ್ಪ, ಮುಖ್ಯಶಿಕ್ಷಕ, ಸ.ಹಿ.ಪ್ರಾ.ಶಾಲೆ ಬಂಕಾಪುರ

=====

ಬಂಕಾಪುರ ಶಾಲೆಯಲ್ಲಿ ಕೊಠಡಿಗಳ ಕೊರತೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ವರದಿ ನೀಡಿಲ್ಲ. ಶಾಲಾ ಕಟ್ಟಡಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಆ ಶಾಲೆಯಲ್ಲಿ ನ ಪರಿಸ್ಥಿತಿಯ ವರದಿ ಪಡೆದು, ಕೊಠಡಿಗಳನ್ನು ಮಂಜೂರು ಮಾಡಲಾಗುವುದು.

> ಶ್ರೀಶೈಲ ಬಿರಾದಾರ, ಡಿಡಿಪಿಐ ಕೊಪ್ಪಳ

====