ಕನಕಗಿರಿ ಉತ್ಸವ ಆಚರಿಸಲು ನಿರ್ಧರಿಸಿರುವ ದಿನಾಂಕ ಮುಂದೂಡುವಂತೆ ಒತ್ತಾಯಿಸಿ ತಾಲೂಕು ಹಿತ ರಕ್ಷಣಾ ವೇದಿಕೆಯಿಂದ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಲಾಯಿತು. ಪ್ರಾಕೃಪಸ ಸಂಘದ ಅಧ್ಯಕ್ಷ ಬಿ.ಕನಕಪ್ಪ, ಉಪಾಧ್ಯಕ್ಷ ಮಹಾಂತೇಶ ಕೊಡ್ಲಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಾಗೀಶ ಹಿರೇಮಠ, ಪಪಂ ಸದಸ್ಯರಾದ ಹನುಮಂತ ಬಸರಿಗಿಡ, ಸುರೇಶ ಗುಗ್ಗಳಶೆಟ್ರ ಇತರರಿದ್ದರು. 
ಜಿಲ್ಲೆ

ಉತ್ಸವ ದಿನಾಂಕ ಮುಂದೂಡದಿದ್ದರೆ 7ಕ್ಕೆ ಕನಕಗಿರಿ ಬಂದ್

ಕನಕಗಿರಿ: ಐತಿಹಾಸಿಕ ಶ್ರೀ ಕನಕಾಚಲಪತಿ ಜಾತ್ರೆ ದಿನವೇ ಕನಕಗಿರಿ ಉತ್ಸವ ಆಚರಿಸದೇ ಉತ್ಸವ ದಿನಾಂಕ ಮುಂದೂಡುವಂತೆ ಒತ್ತಾಯಿಸಿ ತಾಲೂಕು ಹಿತರಕ್ಷಣಾ ವೇದಿಕೆಯಿಂದ ತಹಸೀಲ್ದಾರ್ ವಿಶ್ವನಾಥ ಮುರುಡಿ ಮೂಲಕ ಡಿಸಿಗೆ ಮನವಿ ಸಲ್ಲಿಸಲಾಯಿತು.

ನಗರದ ಎಪಿಎಂಸಿಯಲ್ಲಿ ಉತ್ಸವ ಮುಂದೂಡಲು ಒತ್ತಾಯಿಸಿ ಪಕ್ಷಾತೀತವಾಗಿ ಕರೆಯಲಾಗಿದ್ದ ಸಭೆಯಲ್ಲಿ ಮಂಗಳವಾರ ಮುಖಂಡರು ಮಾತನಾಡಿ, ಫೆ.28ರಂದು ಕನಕಾಚಲ ದೇವಸ್ಥಾನದಲ್ಲಿ ನಡೆದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಾತ್ರೆ ದಿನ ಉತ್ಸವ ಆಚರಿಸುವ ಕುರಿತು ಹೇಳಿದಾಗ ಕೆಲವರು ಆಚರಿಸಬೇಕು ಎಂದರು. ಇನ್ನೂ ಕೆಲವರು ಜಾತ್ರೆಯಲ್ಲಿ ಉತ್ಸವ ಆಚರಣೆಯಿಂದಾಗುವ ತೊಂದರೆಗಳ ಬಗ್ಗೆ ಧ್ವನಿ ಎತ್ತಿದರು. ಪಟ್ಟಣದಲ್ಲಿ ಸ್ಥಳ ಇಕ್ಕಟ್ಟಾಗಿದ್ದರಿಂದ ಜಾತ್ರೆ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತದೆ. ಪಾರ್ಕಿಂಗ್, ಕುಡಿವ ನೀರು ಸೇರಿದಂತೆ ವಿವಿಧ ಸೌಲಭ್ಯಗಳ ಕೊರತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಜಾತ್ರೆ ಜತೆ ಉತ್ಸವ ಆಚರಿಸುವುದು ಸಮಂಜಸವಲ್ಲ.

ಜಾಗದ ಸಮಸ್ಯೆಯಿಂದ ಜನ ಇಂದಿಗೂ ರಾಜಬೀದಿಯ ಮನೆಗಳ ಛಾವಣಿ ಮೇಲೆ ನಿಂತು ಗರುಡೋತ್ಸವ, ರಥೋತ್ಸವ ವೀಕ್ಷಿಸುತ್ತಾರೆ. ಜಾತ್ರೆಯಲ್ಲಿ ಉತ್ಸವ ಆಚರಿಸುವುದರಿಂದ ಭಕ್ತರಿಗೆ ವ್ಯವಸ್ಥೆಯ ತೊಂದರೆಯಾಗಲಿದೆ. ಕನಕಗಿರಿಯ ಗೌರವ ಕಾಪಾಡುವ ನಿಟ್ಟಿನಲ್ಲಿ ಉತ್ಸವವನ್ನು ಮುಂದೂಡಲು ಜಿಲ್ಲಾಡಳಿತ ಕ್ರಮ ವಹಿಸಬೇಕು. ಇಲ್ಲವಾದರೆ ಮಾ.7ಕ್ಕೆ ಕನಕಗಿರಿ ಬಂದ್‌ಗೆ ನಿರ್ಧರಿಸಲಾಗಿದೆ ಎಂದರು.

ಪ್ರಾಕೃಪಸ ಸಂಘದ ಅಧ್ಯಕ್ಷ ಬಿ.ಕನಕಪ್ಪ, ಉಪಾಧ್ಯಕ್ಷ ಮಹಾಂತೇಶ ಕೊಡ್ಲಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಾಗೀಶ ಹಿರೇಮಠ, ಪಪಂ ಸದಸ್ಯರಾದ ಹನುಮಂತ ಬಸರಿಗಿಡ, ಸುರೇಶ ಗುಗ್ಗಳಶೆಟ್ರ, ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಯಮನೂರಪ್ಪ ಸೂಡಿ, ಪ್ರಮುಖರಾದ ರುದ್ರಮುನಿ ಪ್ರಭುಶೆಟ್ಟರ್, ಸಣ್ಣ ಕನಕಪ್ಪ, ಹನುಮಂತರೆಡ್ಡಿ, ಪ್ರಕಾಶ ಹಾದಿಮನಿ, ಮಹಾಂತೇಶ ಸಜ್ಜನ್, ಅಯ್ಯನಗೌಡರೆಡ್ಡಿ, ಕನಕಪ್ಪ ಕೊರಗಟಗಿ, ಗಣೇಶರೆಡ್ಡಿ ಕೆರಿ, ಉಮಕಾಂತ ದೇಸಾಯಿ, ಲಿಂಗಪ್ಪ ಪೂಜಾರ, ಎಂ.ಶರಣಪ್ಪ ಭತ್ತದ, ಹನುಮೇಶ ಯಲಬುರ್ಗಿ, ಕೀರ್ತಿ ಸೋನಿ, ಸಿಂಧು ಬಲ್ಲಾಳ, ಶರಣಪ್ಪ ಭಾವಿಕಟ್ಟಿ, ಅರುಣ್ ಭೂಸನೂರುಮಠ ಇತರರಿದ್ದರು.

ಸಭೆಗೆ ಕಾಂಗ್ರೆಸ್ಸಿಗರು ಗೈರು: ಕನಕಗಿರಿ ಉತ್ಸವ ಮುಂದೂಡಲು ಒತ್ತಾಯಿಸಿ ಪಕ್ಷಾತೀತವಾಗಿ ಕರೆಯಲಾಗಿದ್ದ ಸಭೆಗೆ ಕಾಂಗ್ರೆಸ್ ಮುಖಂಡರು ಗೈರಾಗಿದ್ದು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ನಾವು ಉತ್ಸವ ವಿರೋಧಿಗಳಲ್ಲ. ದಿನಾಂಕ ಮುಂದೂಡುವಂತೆ ಆಗ್ರಹಿಸುತ್ತಿದ್ದೇವೆ. ಇದರಲ್ಲಿಯೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು.