ಕನಕಗಿರಿ: ಕನಕದಾಸರ ಕೀರ್ತನೆಗಳ ಪ್ರತಿ ಸಾಲು ಬದುಕಿನ ಕುರಿತು ಸವಿಸ್ತಾರ ಮಾಹಿತಿ ನೀಡುತ್ತವೆ. ಅವುಗಳನ್ನು ಅರ್ಥೈಸಿಕೊಂಡು ನಡೆದಾಗ ಜನ್ಮ ಸಾರ್ಥಕವಾಗುತ್ತದೆ ಎಂದು ಹಿರಿಯ ಭಜನಾ ಕಲಾವಿದ ಸೂರ್ಯನಾರಾಯಣರೆಡ್ಡಿ ಮಹಲಿನಮನಿ ಹೇಳಿದರು.
ಇಲ್ಲಿನ ಐತಿಹಾಸಿಕ ಶ್ರೀ ತೊಂಡಿತೇವರಪ್ಪ ದೇವಸ್ಥಾನದಲ್ಲಿ ರಾಘವೇಂದ್ರ ಭಜನಾ ಮಂಡಳಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜನಾಗಿದ್ದ ಕನಕದಾಸರು ಯುದ್ಧದಲ್ಲಿ ಗಾಯಗೊಂಡ ಬಳಿಕ ಆಧ್ಯಾತ್ಮದಲ್ಲಿ ಒಲವು ಮೂಡಿ ದಾಸರಾದರು. ಜನ ಸೇವೆ, ಜಾತಿ ಪದ್ಧತಿ ನಿರ್ಮೂಲನೆ, ಮೌಢ್ಯಗಳ ವಿರುದ್ಧ ಹೋರಾಡಿದ್ದಾರೆ. ದಾಸ ಶ್ರೇಷ್ಠ ಕನಕದಾಸರ ಕೀರ್ತನೆಗಳು ಶಕ್ತಿಶಾಲಿಯಾಗಿವೆ ಎಂದರು.
ಬಯಲಾಟ ಕಲಾವಿದ ಪಂಪಾಪತಿ ತುಪ್ಪದ ಮಾತನಾಡಿ, ದಾಸ ಸಾಹಿತ್ಯಕ್ಕೆ ವಿಭಿನ್ನ ಕೊಡುಗೆ ನೀಡಿರುವ ಕನಕದಾಸರು ಕೀರ್ತನೆಗಳ ಮೂಲಕ ಮನುಕುಲದ ಒಳತಿಗಾಗಿ ಉತ್ತಮ ಸಂದೇಶ ನೀಡಿದ್ದಾರೆ. ಸಮಾಜದಲ್ಲಿ ಬೇರೂರಿದ್ದ ಕೀಳರಿಮೆ ತೊಲಗಿಸಲು ಶ್ರಮಿಸಿದ್ದಾರೆ ಎಂದು ಹೇಳಿದರು.
ಕಲಾವಿದರಾದ ಸುರೇಶಪ್ಪ ಬೊಂದಾಡೆ, ಭೀಮೋಜಿರಾವ್ ಮರಾಠಿ, ವಿನಯ ಪತ್ತಾರ, ಸಂತೋಷ್ ಅಚ್ಚಲಕರ, ಕಂಠೆಪ್ಪ ಪೂಜಾರ, ರಾಮಣ್ಣ ಪೂಜಾರ, ಪವನಕುಮಾರ ಪೂಜಾರ, ಅಂಬಣ್ಣ ಹೂಗಾರ, ಸಂಗಯ್ಯಸ್ವಾಮಿ ಬಸರಿಹಾಳಮಠ, ವೆಂಕಟೇಶ ಕುಲಕರ್ಣಿ ಇತರರಿದ್ದರು.