ಕನಕಗಿರಿ: ಜಾಗದ ವಿಷಯದಲ್ಲಿ ವಿವಾದವಾಗಿ ಕಟ್ಟಡ ನಿರ್ಮಾಣವಾಗದೆ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ತಾಲೂಕಿನ ಆದಾಪುರ ಶಾಲೆಗೆ ಸಚಿವ ಶಿವರಾಜ ತಂಗಡಗಿ ಕುಟುಂಬಸ್ಥರು ಜಾಗ ನೀಡುವ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದಾರೆ.
ಆದಾಪುರದಲ್ಲಿ 2019ರಲ್ಲಿದ್ದ ಹಳೆಯ ಕಟ್ಟಡ ತೆರವು ಮಾಡಿ ಹೊಸದಾಗಿ ನಿರ್ಮಿಸಲು ಅನುದಾನ ಬಿಡುಗಡೆಯಾಗಿತ್ತು. ಆದರೆ, ಕಟ್ಟಡ ತೆರವಾದ ಬಳಿಕ ಈ ಜಾಗ ನಮ್ಮದು, ಶಾಲೆಗೆ ನಮ್ಮ ಪೂರ್ವಜರು ನೀಡಿರುವ ಸ್ಥಳ ಬೇರೆಡೆಯಿದೆ ಎಂದು ಸ್ಥಳೀಯರು ತಕರಾರು ಸಲ್ಲಿಸಿದ್ದರು. ಇದರಿಂದ ಕಟ್ಟಡ ನಿರ್ಮಾಣವಾಗಿರಲಿಲ್ಲ. ಬೇರೆಡೆ ಶಾಲೆಗೆ ಮೀಸಲಾಗಿದ್ದ 10 ಗುಂಟೆ ಜಾಗವೂ ಒತ್ತುವರಿಯಾಗಿತ್ತು. ಕಟ್ಟಡ ತೆರವು ಬಳಿಕ ಉಳಿದಿದ್ದ ಕೊಠಡಿಗಳಲ್ಲೇ ತರಗತಿ ನಡೆದಿದ್ದವು. ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿತ್ತು. ಗ್ರಾಮದಲ್ಲಿ ನಡೆದ ರಾಜಿ ಪಂಚಾಯಿತಿಗಳೂ ವಿಫಲವಾಗಿದ್ದವು.
ಹಿಂದಿನ ಶಾಸಕ ಬಸವರಾಜ ದಢೇಸುಗೂರು ಸಹಿತ ಹಾಲಿ ಸಚಿವರ ಗಮನಕ್ಕೆ ವಿಷಯ ತಂದಿದ್ದರೂ ಸಮಸ್ಯೆ ಇತ್ಯರ್ಥವಾಗಿರಲಿಲ್ಲ. ಈಗ ಸಚಿವ ಶಿವರಾಜ ತಂಗಡಗಿ ಆಸಕ್ತಿ ವಹಿಸಿದ್ದು, ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದಾರೆ. ರಸ್ತೆಗೆ ಹೊಂದಿಕೊಂಡಿರುವ 86/1/4ರಲ್ಲಿ ಒಂದು ಎಕರೆ ಜಮೀನು ಖರೀದಿಸಿ, ಅದನ್ನು ಶಾಲೆಗೆ ದೇಣಿಗೆ ನೀಡಲು ಮುಂದಾಗಿದ್ದಾರೆ. ಈಗಾಗಲೇ ಭೂಮಿಯನ್ನು ಗುರುತಿಸಿದ್ದು, ಶೀಘ್ರವೇ ಸಚಿವರು ತಮ್ಮ ತಾಯಿ ಹುಲಿಗೆಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡ ನಂತರ ಶಾಲೆಗೆ ದೇಣಿಗೆ ನೀಡಲು ಸಿದ್ಧತೆ ನಡೆಸಿದ್ದಾರೆ. ಪ್ರಕ್ರಿಯೆಗಳು ಪೂರ್ಣಗೊಂಡು ಶಿಕ್ಷಣ ಇಲಾಖೆಗೆ ಜಾಗ ಹಸ್ತಾಂತರಗೊಂಡ ಬಳಿಕ ಮುಂದಿನ ದಿನಗಳಲ್ಲಿ ಕಟ್ಟಡಕ್ಕೆ ಅನುದಾನ ನೀಡಿ, ಶಾಲೆ ಸ್ಥಳಾಂತರಿಸಲು ಸಚಿವರು ಮುಂದಾಗಿದ್ದಾರೆ.
ಆದಾಪುರ ಶಾಲೆ ಕಟ್ಟಡದ ಸಮಸ್ಯೆ ಹಲವು ದಿನಗಳಿಂದಿತ್ತು. ಇದರಿಂದ ಮಕ್ಕಳಿಗೆ ತೊಂದರೆಯಾಗಿತ್ತು. ಭರವಸೆ ನೀಡಿದಂತೆ ಶಾಲಾ ಕಟ್ಟಡಕ್ಕೆ ಜಾಗ ಖರೀದಿಸಿ ಶಿಕ್ಷಣ ಇಲಾಖೆಗೆ ನೀಡಲಾಗುವುದು.
ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರ ಸಚಿವ