ಕನಕಗಿರಿ: ಅಧ್ಯಾತ್ಮದಿಂದ ಮಾತ್ರ ಮನುಷ್ಯ ಪರಿಪೂರ್ಣನಾಗಲು ಸಾಧ್ಯ ಎಂದು ಬಳಗಾನೂರಿನ ಚಿಕ್ಕೇನಕೊಪ್ಪ ಮಠದ ಶ್ರೀ ಶಿವಶಾಂತವೀರ ಶರಣರು ಹೇಳಿದರು.
ಇಲ್ಲಿನ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದಲ್ಲಿ ಬಸವ ಜಯಂತಿ ನಿಮಿತ್ತ ನಡೆಯುತ್ತಿರುವ ಪರಿಪೂರ್ಣದೆಡೆಗೆ ಆಧ್ಯಾತ್ಮಿಕ ಪ್ರವಚನದಲ್ಲಿ ಸೋಮವಾರ ಆಶೀರ್ವಚನ ನೀಡಿದರು.
ಮನುಷ್ಯ ಬಂಧುಗಳು, ಸ್ನೇಹಿತರು, ಹಣ, ಅಂತಸ್ತಿನಿಂದ ಪರಿಪೂರ್ಣ ಆಗಲಾರ. ಬದಲಾಗಿ ಅಧ್ಯಾತ್ಮದಿಂದ ಪೂರ್ಣತೆ ದೊರೆಯಲಿದೆ. ನಾವು ಗಳಿಸಿರುವ ಹಣ, ಆಸ್ತಿಯನ್ನು ಇಲ್ಲಿಯೇ ಬಿಟ್ಟು ಹೋಗುತ್ತೇವೆ. ದೇವರನ್ನು ಕಾಣಬೇಕೆಂದು ಬಯಸುವ ಮನುಷ್ಯ ಒಳ್ಳೆಯ ಕೆಲಸ ಮಾಡಬೇಕು. ಅವರ ನಡೆ-ನುಡಿ ಒಂದಾಗಿರಬೇಕು. ಸುವರ್ಣಗಿರಿ ಸಂಸ್ಥಾನ ವಿರಕ್ತಮಠವು 60 ವಷರ್ಗಳ ಹಿಂದೆಯೇ ದಾಸೋಹ ಆರಂಭಿಸಿ ಹಲವರಿಗೆ ಹಸಿವು ನೀಗಿಸಿದೆ. ಶಾಲಾ-ಕಾಲೇಜುಗಳನ್ನು ಆರಂಭಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಪರಿಪೂರ್ಣದೆಡೆಗೆ ಎನ್ನುವ ಪ್ರವಚನದ ಮೂಲಕ ಭಕ್ತರನ್ನು ಪರಮಾತ್ಮನ ಕಡೆಗೆ ಕರೆದೊಯ್ಯಲು ಮಠದ ಶ್ರೀಗಳು ಮುಂದಾಗಿದ್ದಾರೆ ಎಂದರು.
ಹೂವಿನ ಹಡಗಲಿ ಗವಿಮಠ ಶಾಖೆಯ ಪೀಠಾಧಿಪತಿ ಡಾ.ಶ್ರೀ ಹಿರಿಯ ಶಾಂತವೀರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣವರು ಕಾಯಕ ಹಾಗೂ ದಾಸೋಹ ಪರಿಕಲ್ಪನೆ ಮೂಡಿಸಿದರು. ಕಾಯಕದಲ್ಲಿ ದೇವರನ್ನು ಕಾಣುವಂತೆ, ಹಸಿದವರಿಗೆ ಅನ್ನ ನೀಡಿ ಪರಮಾತ್ಮನ ಒಲುಮೆಗೆ ಪಾತ್ರವಾಗುವಂತೆ ಸಂದೇಶ ನೀಡಿದ್ದರು. ಅನ್ಯರಿಗೆ ಕೇಡು ಬಯಸದೆ ಬುದ್ದಿವಂತಿಕೆಯಿಂದ ಮನುಷ್ಯ ಬೆಳೆಯುವುದಕ್ಕೆ ಮುಂದಾಗಬೇಕು. ಸಂಬಂಧಿಕರು, ನೆರೆ ಹೊರೆಯವರೊಂದಿಗೆ ಪ್ರೀತಿ ವಾತ್ಸಲ್ಯದಿಂದ ಬದುಕಬೇಕು ಎಂದು ತಿಳಿಸಿದರು.
ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ.ಶ್ರೀ ಚನ್ನಮಲ್ಲ ಸ್ವಾಮೀಜಿ ಆಶೀರ್ವಚನ ನೀಡಿದರು. ಚುರ್ಚಿಹಾಳದ ಪುಟ್ಟರಾಜ ಶಾಸ್ತ್ರಿಗಳು ಪ್ರವಚನ ನೀಡಿದರು. ಹೈಕೋರ್ಟ್ ವಕೀಲ ಎಂ.ವಿ. ಹಿರೇಮಠ ಇದ್ದರು.