ವಿಜಯಪುರ: ಕನ್ನಡ ಸಾಹಿತ್ಯ ಲೋಕಕ್ಕೆ ಸಂತ ಕನಕದಾಸರ ಕೊಡುಗೆ ಅಪಾರ ಎಂದು ಮಸಬಿನಾಳ ದಾಸೋಹ ವಿರಕ್ತಮಠದ ಪರಮಪೂಜ್ಯ ಸಿದ್ಧರಾಮ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ದಿ. ಶಂಕರಾನಂದ ಕಾಳಪ್ಪ ಉತ್ಲಾಸರ, ದಿ. ಎಂ.ಎಂ. ಹುಂಡೇಕಾರ, ಮುದಕಯ್ಯ ಮಠ ಹಾಗೂ ಶಂಕ್ರಮ್ಮ ಮಠ ಇವರ ಹೆಸರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೀರ್ತನೆ, ಉಗಾಭೋಗ, ಸುಳಾದಿಗಳ ಹೀಗೆ ಅನೇಕ ಪ್ರಕಾರಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದವರು ಕನಕದಾಸರು. ಶ್ರೀ ಕೃಷ್ಣ ಪರಮಾತ್ಮನ ಪರಮ ಭಕ್ತರಾದ ಕನಕದಾಸರು ವ್ಯಾಸರಾಯರ ಪ್ರೀತಿಯ ಶಿಷ್ಯರಾಗಿ, ಕರ್ನಾಟಕ ಸಂಗೀತದ ಸಂಯೋಜಕರಾಗಿ, ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಕೀರ್ತನೆಗಳನ್ನು ನೀಡಿದ್ದಾರೆ. ನಳಚರಿತ್ರೆ, ಮೋಹನ ತರಂಗಿಣಿ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ ಎಂಬ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಉತ್ಲಾಸರ ಮಾತನಾಡಿ, ಕಾಗಿನೆಲೆಯಾದಿಕೇಶವ ಅಂಕಿತದಡಿಯಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿರುವ ಕನಕದಾಸರು ಕನ್ನಡ ನಾಡಿನ ಸಾಹಿತ್ಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಸಾಮಾಜಿಕ ಅಸಮಾನತೆ, ಮೂಢನಂಬಿಕೆಗಳನ್ನು ಹೋಗಲಾಡಿಸಿ ಸಮಾಜ ಬೆಳಗಿದ ಶ್ರೇಷ್ಠ ಸಂತರಾಗಿ ಹೊರಹೊಮ್ಮಿದ್ದಾರೆ ಎಂದರು.
ಸಂತ ಕನಕದಾಸರ ಸಾಹಿತ್ಯ ಹಾಗೂ ಕೀರ್ತನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ಮೆಹತಾಬ ಕಾಗವಾಡ ಅವರು, ಕನಕದಾಸರ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸಿದ ಕೀರ್ತಿ ಡಾ. ರಾಜಕುಮಾರ್, ಖ್ಯಾತ ಗಾಯಕ ಪುತ್ತೂರು ನರಸಿಂಹನಾಯಕ ಅವರಿಗೆ ಸಲ್ಲುತ್ತದೆ ಎಂದರು.
ದತ್ತಿದಾನಿಗಳಾದ ವಿವೇಕ ಹುಂಡೇಕಾರ, ವಿಜಯ ಹುಂಡೇಕಾರ, ರಾಜು ಕಂಬಾಗಿ, ಬಂದೇನವಾಜ ಬೀಳಗಿ, ಶಾರದಾ ಅರ್ಜುನ ಲಮಾಣಿ, ಸಂಗಮೇಶ ಓಲೇಕಾರ, ರಾಜೇಶ್ವರಿ ಮೋಪಗಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕಸಾಪದಿಂದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮೇಯರ್ ಎಂ.ಎಸ್. ಕರಡಿ ಹಾಗೂ ಉಪಮೇಯರ್ ಸುಮಿತ್ರಾ ರಾಜು ಜಾಧವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹ.ಮ. ಪೂಜಾರಿ, ಎಲ್.ಬಿ. ಶೇಖ, ಸೋಮಣ್ಣ ಧನಗೊಂಡ, ಯುನಿಯನ್ ಬ್ಯಾಂಕ್ ಅಧ್ಯಕ್ಷ ಎಂ.ಸಿ ಮುಲ್ಲಾ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಸಂಪಳ್ಳಿ, ಪರಶುರಾಮ ಭಾಸಗಿ, ಸುನೀಲ ಕಾಂಬಳೆ ಹಾಗೂ ಸಿದ್ದಪ್ಪ ಕಬಾಡಗಿ, ಭೀಮಸೇನ ಬಜೇಣಿ, ಲಕ್ಷ್ಮಣ ಹಿರೇಕುರುಬರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಕೆ.ಎಸ್. ಹಣಮಾಣಿ, ಟಿ.ಆರ್. ಹಾವಿನಾಳ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಮಹಾದೇವ ಮೋಪಗಾರ, ಜಿ.ಎಸ್. ಬಳ್ಳೂರ, ಬಿ.ಕೆ. ಗೋಟ್ಯಾಳ, ಲತಾ ಗುಂಡಿ, ಗಂಗಮ್ಮ ರಡ್ಡಿ, ಶಾಂತಾ ವಿಭೂತಿ, ಸಿದ್ದನಗೌಡ ಪಾಟೀಲ, ಚಂದ್ರಶೇಖರ ಸರೂರ, ಎಸ್.ಎಸ್. ಸಾತಿಹಾಳ, ಐ.ಎಸ್. ಚಿಮ್ಮಲಗಿ, ಎಸ್.ಎನ್. ಗೌಡರ, ಸುರೇಶ ಗೆಜ್ಜಿ, ವಿಜಯಕುಮಾರ ಹುಂಡೇಕಾರ, ಸಿದ್ದು ನಾಲತವಾಡ, ಮಲ್ಲಿಕಾರ್ಜುನ ಕೆಳಗಡೆ, ಸುನೀಲ ವನರೊಟ್ಟಿ, ಸಾಯಬಣ್ಣ ಮಾದರ ಮತ್ತಿತರರಿದ್ದರು.
ಶಶಿಕಲಾ ನಾಯ್ಕೋಡಿ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಸ್ವಾಗತಿಸಿ ಸಾಧಕರನ್ನು ಪರಿಚಯಿಸಿದರು. ಡಾ.ಆನಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಶಿಕ್ಷಕ ರಿಯಾಜ ಪಿಂಜಾರ ವಂದಿಸಿದರು.