ಬೀಳಗಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಶಾಸಕ ಜೆ.ಟಿ. ಪಾಟೀಲ ಉದ್ಘಾಟಿಸಿದರು. ತಹಸೀಲ್ದಾರ್ ವಿನೋದ ಹತ್ತಳ್ಳಿ, ತಾಪಂ ಇಒ ಅಭಯಕುಮಾರ ಮೊರಬ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ ಇದ್ದರು. 
ಜಿಲ್ಲೆ

ಮನುಕುಲಕ್ಕೆ ಕನಕದಾಸರ ಕೊಡುಗೆ ಅಪಾರ

ಬೀಳಗಿ: ಕೀರ್ತನೆ ಹಾಗೂ ಸಾಹಿತ್ಯ ಕೃತಿಗಳಿಂದ ಸಮಾಜದಲ್ಲಿನ ಅಂಕುಡೊಂಕು ತಿದ್ದಲು ತಮ್ಮ ಸರಳ ಜೀವನ ಮುಡುಪಾಗಿಟ್ಟ ಸಂತ ಕವಿ ಶ್ರೀ ಕನಕದಾಸರ ಕೊಡುಗೆ ಮನುಕುಲಕ್ಕೆ ಅಪಾರವಾಗಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಸ್ಥಳೀಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ, ತಾಪಂ, ಪಪಂ ಹಾಗೂ ಹಾಲುಮತ ಸಮಾಜದ ಸಂಯುಕ್ತಾಶ್ರಯದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಕ್ತ ಕನಕದಾಸರು ಸಾಮಾಜಿಕ ಚಿಂತನೆ ಅಭಿವೃದ್ಧಿಯ ಹರಿಕಾರರು. ದಾಸರಲ್ಲಿ ಪುರಂದರ ದಾಸರು, ಕನಕದಾಸರು, ಕಾಳಿದಾಸರೂ ಮೇಲು, ಕೀಳು ಎನ್ನುವ ಮನೋಭಾವ ತೊಡೆದುಹಾಕುವಲ್ಲಿ ಮಹತ್ವದ ಸಂದೇಶ ಸಾರಿದ್ದಾರೆ. ಅವರ ಸಂದೇಶಗಳನ್ನು ನಾವು ಪಾಲನೆ ಮಾಡಬೇಕು ಎಂದರು.

ಹಾಲುಮತ ಸಮಾಜದ ಹಿರಿಯ ಮುಖಂಡ ಸತ್ಯಪ್ಪ ಮೇಲ್ನಾಡ ಮಾತನಾಡಿ, ಬೀಳಗಿ ಕ್ರಾಸ್ ಬಳಿಯ ಕನಕದಾಸರ ಸಮುದಾಯ ಭವನ ನಿರ್ಮಾಣದ ಕಾರ್ಯ ಅರ್ಧಕ್ಕೆ ನಿಂತಿದೆ. ಅದಕ್ಕೆ ಅನುದಾನ ಬಿಡುಗೊಳಿಸಿ ಬರುವ ವರ್ಷದಲ್ಲಿ ಪೂರ್ಣಗೊಳ್ಳುವಂತೆ ಮಾಡಿ ಎಂದು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಸಮುದಾಯ ಭವನಕ್ಕೆ 3 ಕೋಟಿ ರೂ. ಅನುದಾನ ದೊರಕಿಸಲು ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಕನಕದಾಸರ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ತಹಸೀಲ್ದಾರ್ ವಿನೋದ ಹತ್ತಳ್ಳಿ, ತಾಪಂ ಇಒ ಅಭಯಕುಮಾರ ಮೊರಬ, ಬಿಇಒ ಆರ್.ಎಸ್. ಆದಾಪೂರ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಉಪನೋಂದಣಿ ಅಧಿಕಾರಿ ಎಸ್.ಬಿ. ಮುಂಡರಗಿ, ಕೃಷಿ ಅಧಿಕಾರಿ ಶ್ರೀನಿವಾಸ ಪಾಟೀಲ, ಸಿಡಿಪಿಒ ಬಿ.ಜಿ. ಕವಟೇಕರ, ಹಾಲುಮತ ಸಮಾಜ ಅಧ್ಯಕ್ಷ ಪಡಿಯಪ್ಪ ಕರಿಗಾರ ಇದ್ದರು.