ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಗ್ರಾಮಸ್ಥರು ಬೃಹತ್ ಹೂವಿನ ಹಾರ ಹಾಕಿ ಅಭಿನಂದಿಸಿದರು. ಚಲುವರಾಯಸ್ವಾಮಿ, ಬೈರತಿ ಸುರೇಶ್, ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಬಿ.ಎಸ್.ಶಿವಣ್ಣ, ಸುರೇಶ್, ಬಿ.ಸೋಮಶೇಖರ್, ಮಹದೇವ ಇದ್ದರು. 
ಜಿಲ್ಲೆ

ಮನುಷ್ಯತ್ವದ ಬೀಜ ಬಿತ್ತಿದ್ದ ಕನಕದಾಸರು

ಮಳವಳ್ಳಿ: ದೇಶದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವ ಕನಸು ಕಂಡಿದ್ದ ಕನಕದಾಸರು ಕೀರ್ತನೆಗಳ ಮೂಲಕ ಸಮಾಜದಲ್ಲಿ ಮನುಷ್ಯತ್ವದ ಬೀಜ ಬಿತ್ತಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ತಾಲೂಕಿನ ಮಂಚನಹಳ್ಳಿ ಗ್ರಾಮದಲ್ಲಿ ಕನಕದಾಸ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಿರ್ಮಿಸಿರುವ ಭಕ್ತ ಕನಕದಾಸರ ಕಂಚಿನ ಪುತ್ಥಳಿಯನ್ನು ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕುಲ ಕುಲ ಎಂದು ಹೊಡೆದಾಡಬೇಡಿ… ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ.. ಎಂದು ಸಮಾಜಕ್ಕೆ ಸಂದೇಶ ಸಾರಿದವರನ್ನು ಜನರು ಪ್ರೀತಿಯಿಂದ ಭಕ್ತ, ಸಂತ ಕನಕದಾಸ ಎಂದು ಗೌರವಿಸುತ್ತಿದ್ದಾರೆ. ಇಂತಹ ಸಂತಶ್ರೇಷ್ಠನ ಪ್ರತಿಮೆ ನಿರ್ಮಾಣ ಮಾಡೋದು ಮುಖ್ಯವಲ್ಲ. ಬದಲಾಗಿ ಅವರ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಗ್ರಾಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿವಿಧ ಜಾನಪದ ಕಲಾತಂಡದೊಂದಿಗೆ ಬರಮಾಡಿಕೊಳ್ಳಲಾಯಿತು. ಜೆಸಿಬಿ ಯಂತ್ರದ ಮೂಲಕ ಬೃಹತ್ ಸೇಬಿನ ಹಾರ ಹಾಕಲಾಯಿತು. ಸಚಿವರಾದ ಚಲುವರಾಯಸ್ವಾಮಿ, ಬೈರತಿ ಸುರೇಶ್, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಲೋಹಿಯಾ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಮಾಜಿ ಸಚಿವ ಬಿ.ಸೋಮಶೇಖರ್, ಕನಕದಾಸ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವ ಇತರರಿದ್ದರು.