ಜಿಲ್ಲೆ

ಸಂಗೀತಕ್ಕೆ ಕನಕದಾಸರ ಕೊಡುಗೆ ಅಪಾರ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಣ್ಣನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಕನಕದಾಸರು ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಸಾರ ಕೃತಿಯನ್ನು ಕನಕದಾಸರು ರಚಿಸಿದ್ದರು. ಈ ಮೂಲಕ ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಸಂಗೀತಕ್ಕೆ ಅವರ ಕೊಡುಗೆ ಅಪಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ 537ನೇ ಕನಕ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹರಿಭಕ್ತ ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಡಾ ಗ್ರಾಮದಲ್ಲಿ 1509ನೇ ಇಸವಿಯಲ್ಲಿ ಜನಿಸಿದರು. ಶ್ರೀಕೃಷ್ಣ ಪರಮಾತ್ಮ ದೇವರೇ ಕನಕದಾಸರ ಭಕ್ತಿಗೆ ಮೆಚ್ಚಿ ಅವರಿಗೆ ವಿಶೇಷ ದರ್ಶನ ನೀಡಿದರು. ಈ ಘಟನೆಯಿಂದ ಕನಕದಾಸರ ಅಪಾರ ಭಕ್ತಿಯನ್ನು ತಿಳಿಯಬಹುದಾಗಿದೆ ಎಂದರು.

ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರ ಹಾವೇರಿ ಜಿಲ್ಲೆಯಲ್ಲಿ ಕನಕಪೀಠವನ್ನು ಸ್ಥಾಪನೆ ಮಾಡಿದರು. ಶ್ರೀರಂಗಪಟ್ಟಣದ ಮಹದೇವಪುರದ ಬಳಿ ಕಾವೇರಿ ನದಿಯ ಮಧ್ಯದಲ್ಲಿ ದಾಸ ಶ್ರೇಷ್ಠರಾದ ಕನಕದಾಸರು ಕುಳಿತು ಧ್ಯಾನ ಮಾಡಿರುವ ಕನಕ ಬಂಡೆಯನ್ನು ಅಭಿವೃದ್ಧಿಪಡಿಸಲು ಹಲವರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಕನಕದಾಸರ ಇತಿಹಾಸವನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ವರದಿ ರಚಿಸಿ ನಂತರ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುವುದು ಎಂದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಕನಕದಾಸರು ಜಾತಿ ಪದ್ಧತಿಯನ್ನು ಹೋಗಲಾಡಿಸಲು ಹೋರಾಟ ಮಾಡಿ ಎಲ್ಲ ಕುಲದವರು ಒಂದೇ ಎಂದು ಸಾರಿದ ದಾರ್ಶನಿಕರು. ಅಂದಿನ ಸಮಾಜದಲ್ಲಿ ಒಗ್ಗಟ್ಟನ್ನು ತರುವ ಸಲುವಾಗಿ ಶ್ರಮಿಸಿದ ಮಹಾನ್ ಹೋರಾಟಗಾರರಾಗಿದ್ದಾರೆ. ಯಾವುದೇ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡದೆ ಅನೇಕ ಕಾವ್ಯಗಳನ್ನು ರಚನೆ ಮಾಡಿದ್ದಾರೆ ಎಂದರು.

ತಳಗವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕಿ ಎಂ.ಡಿ.ಪವಿತ್ರಾ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಮ್, ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ ಎಲ್ ಸುರೇಶ್, ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಕೆ.ರಾಜೇಶ್, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ನಗರಸಭೆ ಸದಸ್ಯ ಶ್ರೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ.ಸಿದ್ದಲಿಂಗೇಶ್ ಇತರರಿದ್ದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯ ಅವರಣದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೈಸೂರು-ಬೆಂಗಳೂರು ರಸ್ತೆ, ಆರ್.ಪಿ ರಸ್ತೆಯ ಮೂಲಕ ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಂಡಿತು.