ಜಿಲ್ಲೆ

ನಗರದ ವಿವಿಧೆಡೆ ಕನಕದಾಸ ಜಯಂತಿ


ಮೈಸೂರು: ನಗರದ ವಿವಿಧ ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳಲ್ಲಿ ಶುಕ್ರವಾರ ಕನಕದಾಸ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬೋಗಾದಿ ಮುಖ್ಯರಸ್ತೆಯ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಕನಕ ಜಯಂತಿ ಆಚರಿಸಲಾಯಿತು. ಶಾಲಾ ಆಡಳಿತಾಧಿಕಾರಿ ಕಾಂತಿನಾಯಕ್ ಮಾತನಾಡಿ, ದಾಸರ ಪರಂಪರೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಕನ್ನಡ ಶಿಕ್ಷಕಿ ಸುನೀತಾ, ಕನಕದಾಸರ ಕೆಲವು ಗೀತೆಗಳನ್ನು ಹಾಡಿ ರಂಜಿಸಿದರು.


ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಎಸ್.ಸುನೀಲ್‌ಕುಮಾರ್, ಮುಖ್ಯಶಿಕ್ಷಕ ಮಹಮದ್ ಫಾರೂಕ್, ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಹರ್ಷಿ ವಿದ್ಯಾಸಂಸ್ಥೆಯಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು. ಪಬ್ಲಿಕ್ ಶಾಲೆಯ ಪ್ರಾಚಾರ್ಯ ಎ.ಕುಮಾರ್ ಮಾತನಾಡಿ, ಕನಕದಾಸರ ಸಾಧನೆ ಹಾಗೂ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ ರೀತಿಯನ್ನು ವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಹ್ಲಾದ್ ಮತ್ತು ಸಂಗೀತ ಶಿಕ್ಷಕ ಪುರುಷೋತ್ತಮ್ ಕನಕದಾಸರ ಗೀತೆಗಳನ್ನು ಹಾಡಿದರು.

ಶಾಸಕರ ಕಚೇರಿ: ಪಡುವಾರಹಳ್ಳಿಯ ಸ್ನೇಹ ಬಳಗದ ವತಿಯಿಂದ ಜಲದರ್ಶಿನಿ ಅತಿಥಿ ಗೃಹದ ಚಾಮರಾಜ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು.
ಶಾಸಕ ಎಲ್.ನಾಗೇಂದ್ರ ಮಾತಮಾಡಿ, ಕನಕದಾಸರು ಕೀರ್ತನೆಗಳ ಮೂಲಕ ಸಮಾಜ ಸುಧಾರಣೆ ಕಾಯಕ ಮಾಡಿ ಹರಿದಾಸ ಪರಂಪರೆಯಲ್ಲಿ ದೊಡ್ಡ ತತ್ವಜ್ಞಾನಿ, ಸಂಗೀತ ತಜ್ಞರಾಗಿ ಪ್ರಜ್ವಲಿಸಿದರು. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಸರಳವಾದ ಉಪಮೆ ಬಳಸಿದ್ದರಿಂದಲೇ ಎಲ್ಲರಿಗೂ ಅಷ್ಟೊಂದು ಇಷ್ಟವಾದರು. ಅವರ ಕೃತಿಗಳಲ್ಲಿ ಸರಳ ಭಾಷೆ, ಪದ ಬಳಕೆ ಗಮನ ಸೆಳೆಯುವುದಲ್ಲದೆ, ಸುಲಭವಾಗಿ ಅರ್ಥವಾಗುತ್ತಿತ್ತು. ಇದರಿಂದಲೇ ಅವರ ಕೀರ್ತನೆ ಕೇಳಲು ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಆ ಮೂಲಕ ದಾಸ ಶ್ರೇಷ್ಠವರ್ಯರು ಎನಿಸಿದರು ಎಂದರು.


ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ಎಂ. ರಾಮಕೃಷ್ಣ, ಬಿಜೆಪಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಶೇಖರ ರಾಜು, ನಗರಪಾಲಿಕೆ ಸದಸ್ಯ ಎಂ.ಚಿಕ್ಕವೆಂಕಟು, ಮಾಜಿ ಸದಸ್ಯ ಗುರು ವಿನಾಯಕ, ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷೆ ಮಹಾಲಕ್ಷ್ಮೀ ಇತರರಿದ್ದರು.

ಜೆಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆ: ಮೇಟಗಳ್ಳಿಯ ಜೆಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು. ಸಹ ಶಿಕ್ಷಕಿ ಎಸ್.ಎಂ.ಭಾರತಿ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮುಖಾಂತರ ಸಮಾಜದ ಜಾತಿ-ಮೌಢ್ಯತೆಗಳ ಬಗ್ಗೆ ಎಚ್ಚರಿಸಿದರು. ಪ್ರತಿಯೊಬ್ಬರೂ ಮಾನವೀಯತೆ ರೂಢಿಸಿಕೊಂಡು ಸಮಾಜದಲ್ಲಿ ಹೇಗೆ ಬದುಕಬೇಕೆಂದು ತಿಳಿಸುತ್ತಾ ಉಡುಪಿಯಲ್ಲಿನ ಕನಕನ ಕಿಂಡಿಯ ಬಗ್ಗೆ ವಿವರಿಸಿದರು.
ಮುಖ್ಯಶಿಕ್ಷಕ ಎನ್.ಪಿ.ಸತೀಶ್ ಮಾತನಾಡಿ, ಕನಕದಾಸರು ಮನುಕುಲಕ್ಕೆ ಕೀರ್ತನೆಗಳ ಮೂಲಕ ಉತ್ತಮ ಜೀವನ ಸಂದೇಶ ನೀಡುವುದರ ಜತೆಗೆ ಮನುಷ್ಯ ಪ್ರೀತಿ ಮತ್ತು ಭಕ್ತಿಯಿಂದ ಹೇಗೆ ಬದುಕಬೇಕೆಂದು ತೋರಿಸಿಕೊಟ್ಟರು ಎಂದು ಹೇಳಿದರು. ಸಹ ಶಿಕ್ಷಕರಾದ ಡಿ.ಚೇತನ್, ರಾಧಾ ಇತರರಿದ್ದರು.