ವಿಜಯವಾಣಿ ಸುದ್ದಿಜಾಲ ಉಡುಪಿ
ಕನಕದಾಸರು ತಮ್ಮ ಕೀರ್ತನೆಗಳ ಮೂಲಕವೇ ಸಮಾಜದಲ್ಲಿದ್ದ ಜಾತಿ ವ್ಯವಸ್ಥೆಯನ್ನು ಕಟುವಾಗಿ ಖಂಡಿಸಿದರು. ಸಮಾಜದಲ್ಲಿ ಶಾಂತಿ, ಸಮಾನತೆ, ಭ್ರಾತೃತ್ವ ಸಾರಲು ಜೀವನ ಮುಡಿಪಾಗಿಟ್ಟಿದ್ದರು. ಜೀವಿತಾವಧಿಯಲ್ಲಿ ಉಡುಪಿಗೂ ಆಗಮಿಸಿದ್ದ ಕನಕದಾಸ, ಹಳ್ಳಿ ಹಳ್ಳಿಗೆ ಸಂಚರಿಸಿ ಜನರಿಗೆ ಸತ್ಯ-ಅಸತ್ಯದ ಅರಿವು ಮೂಡಿಸಿದ್ದರು ಎಂದು ಉಪನ್ಯಾಸಕಿ ನಾಗರತ್ನಾ ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ. ಮಾತನಾಡಿ, ವಿದ್ಯಾರ್ಥಿಗಳು ದಾರ್ಶನಿಕರ ತತ್ತ್ವಾದರ್ಶ ಅರಿತು ಆತ್ಮಬಲ ಹೆಚ್ಚಿಸಿಕೊಳ್ಳಬೇಕು. ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ಕಂಪ್ಯೂಟರೀಕರಣ, ಜಾಗತೀಕರಣದ ಪ್ರಭಾವದಿಂದಾಗಿ ಮಾನವೀಯತೆ ಕುಸಿಯುತ್ತಿದೆ. ಮಕ್ಕಳಂತೂ ಮೊಬೈಲ್ನಲ್ಲೇ ಮುಳುಗಿದ್ದು, ಮೌಲ್ಯಗಳ ಜ್ಞಾನವೇ ಇಲ್ಲದಾಗಿದೆ. ಕನಕದಾಸರಂತಹ ಶ್ರೇಷ್ಠ ಸಂತರ ಕೀರ್ತನೆ, ಸಾಹಿತ್ಯದ ಕುರಿತು ಪಾಲಕರು, ಶಿಕ್ಷಕರು ಅರಿವು ಮೂಡಿಸಬೇಕು ಎಂದರು.
ಮುಖ್ಯೋಧ್ಯಾಪಕಿ ಇಂದಿರಾ ಬಿ. ಮಾತನಾಡಿದರು. ಉಪನ್ಯಾಸಕರಾದ ಕಿರಣ್ ಕಾಮತ್, ಜ್ಯೋತಿ, ಮೀನಾಕ್ಷಿ ನಾಯಕ್, ಮೋಹಿನಿ, ವಸಂತ್, ರಾಮಚಂದ್ರ ಭಟ್, ಸುಚಿತ್ರಾ, ನಾಗರತ್ನಾ ಭಾಗವತ್, ರಜನಿ, ವೇದಿಕೆಯ ಸದಸ್ಯರಾದ ಸುರೇಶ್ ಡಿ., ಅನುರಾಧಾ ಜಿ.ಎಸ್., ಶ್ರೀದೇವಿ, ಜಯಶ್ರೀ ಇತರರು ಉಪಸ್ಥಿತರಿದ್ದರು.