ವಿಜಯವಾಣಿ ಸುದ್ದಿಜಾಲ ಉಳ್ಳಾಲ ಕನಕದಾಸರ ಕೀರ್ತನೆಗಳಲ್ಲಿ ಸರ್ವಧರ್ಮ ಸಮಭಾವ ಹಾಗೂ ಸೌಹಾರ್ದ ಭಾವವನ್ನು ಒಳಗೊಂಡ ಸೂಫಿ ಚಿಂತನೆಗಳ ಪ್ರಭಾವವಿದ್ದು, ಶಿಶುನಾಳ ಶರೀಫರ ತತ್ವ ಪದಗಳಿಗೂ ಕನಕದಾಸರ ಕೀರ್ತನೆಗಳಿಗೂ ಹೋಲಿಕೆಯಿದೆ ಎಂದು ಮಂಗಳೂರು ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಇಸ್ಮಾಯಿಲ್ ಎನ್. ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನಾ ಕೇಂದ್ರ ವತಿಯಿಂದ ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನಕ ತತ್ವ ಚಿಂತನೆ ಪ್ರಚಾರೋಪನ್ಯಾಸ ಮಾಲಿಕೆಯಡಿ ‘ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಮೌಲ್ಯಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಪ್ರಮುಖರಾದ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಕನಕದಾಸರ ಚಿಂತನೆಗಳಲ್ಲಿ ಭಕ್ತಿ ಮತ್ತು ಜ್ಞಾನವಿದೆ. ಜ್ಞಾನವನ್ನು ವಿಸ್ತರಿಸುವ, ಪಸರಿಸುವ ಕಾರ್ಯ ಸಮಾಜದ ಬೆಳವಣಿಗೆಗೆ ಅಗತ್ಯ. ಅದನ್ನು ವಿ.ವಿ. ಕನಕದಾಸ ಪೀಠ ಮಾಡುತ್ತಾ ಬಂದಿದೆ ಎಂದರು. ಪ್ರಾಂಶುಪಾಲ ಡಾ.ಸತೀಶ್ ಗಟ್ಟಿ ಅಧ್ಯಕ್ಷತೆ ವಹಿಸಿ, ಕನಕದಾಸರ ರಚನೆಗಳಲ್ಲಿ ಸಾಮಾಜಿಕ ವಿಮರ್ಶೆಯಿದೆ ಎಂದರು. ವಿ.ವಿ. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಪ್ರೊ.ಶೇಷಪ್ಪ್ಪ, ಪ್ರಾಧ್ಯಾಪಕರಾದ ಹೈದರಾಲಿ, ಡಾ.ವತ್ಸಲಾ, ಕನಕ ಪೀಠದ ಸರಿತಾ, ಕಿರಣ್ ಉಪಸ್ಥಿತರಿದ್ದರು. ಮುಡಿಪು ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ತನುಜಾ ಸ್ವಾಗತಿಸಿದರು. ಮರಿಯವ್ಮಾತ್ ಸಫಿದಾ ನಿರೂಪಿಸಿದರು. ವಿದ್ಯಾರ್ಥಿನಿ ಆಯಿಶತ್ ರಫಿಯಾ ವಂದಿಸಿದರು.
ಕನಕದಾಸರ ಕೀರ್ತನೆ ಹಾಗೂ ರಾಮಧಾನ್ಯ ಚರಿತೆ ಕಾವ್ಯದಲ್ಲಿ ಸಾಮಾಜಿಕ ಆಂದೋಲನದ ಬದ್ಧತೆಯಿದೆ. ಗೌತಮ ಬುದ್ಧ, ಬಸವಣ್ಣ, ಕನಕ, ಪುರಂದರದಾಸ, ವಿವೇಕಾನಂದ, ಗಾಂಧಿ ಹೀಗೆ ಅನೇಕ ಸಂತ ವ್ಯಕ್ತಿತ್ವದ ಚಿಂತಕರು ಮಾನವೀಯತೆ ಬೋಧಿಸಿ ನಮಗೆ ದಾರಿದೀಪವಾಗಿದ್ದಾರೆ. ಡಾ.ಇಸ್ಮಾಯಿಲ್ ಎನ್., ಮಂಗಳೂರು ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ