ಜಿಲ್ಲೆ

ಬಾಡಾ ಉತ್ಖನನದಿಂದ ಕಾಗಿನೆಲೆ ಅಭಿವೃದ್ಧಿ, ಕನಕ ಜಯಂತಿ ಕಾರ್ಯಕ್ರಮದಲ್ಲಿ ಡಾ. ಎಸ್.ಜಿ. ಸಾಮಕ್ ಹೇಳಿಕೆ

Udupi

ಉಡುಪಿ : ಕನಕದಾಸರು ಹುಟ್ಟಿದ ಹಾವೇರಿ ಜಿಲ್ಲೆಯ ಬಾಡ ನಿವೇಶನವನ್ನು ಉತ್ಖನನ ಮಾಡಿದ ಪರಿಣಾಮ ಕಾಗಿನೆಲೆ ಅಭಿವೃದ್ಧಿ ಸಾಧ್ಯವಾಯಿತು ಎಂದು ಪುರಾತತ್ವ ಶಾಸ್ತ್ರಜ್ಞ ಡಾ. ಎಸ್.ಜಿ ಸಾಮಕ್ ಹೇಳಿದರು.

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕನಕದಾಸ ಅಧ್ಯಯನ ಸಂಶೋಧನ ಪೀಠ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಕನಕ ಜಯಂತಿ ಕಾರ್ಯಕ್ರಮದಲ್ಲಿ ಬಾಡ ಉತ್ಖನನದಲ್ಲಿ ಕಂಡುಬಂದ ಕನಕದಾಸರ ನೆಲೆಯ ಕುರಿತಾದ ಸಂಶೋಧನೆ ವಿವರವನ್ನು ನೀಡಿದರು.

ಕನಕದಾಸರ ನೆಲೆಯ ದಿಬ್ಬವನ್ನು 72 ಟ್ರಂಚ್‌ಗಳಾಗಿ ಮಾಡಿ ನಡೆಸಿದ ಉತ್ಖನನದ ಅವಧಿಯಲ್ಲಿ ಕಂಡುಬಂದ ಕಟ್ಟಡ ರಚನಾ ವಿನ್ಯಾಸ ವಿಜಯನಗರ ಕಾಲಕ್ಕೆ ಸರಿಹೊಂದುವಂತಿದೆ. ಉತ್ಖನನ ಕಾಲದಲ್ಲಿ ಅವರ ಮನೆಯ ವಿವಿಧ ರಚನೆಗಳನ್ನು ಗುರುತಿಸುವುದಕ್ಕೆ ಸಾಧ್ಯವಾಯಿತು. ಕನಕದಾಸರ ನೆಲೆಯು ಒಂದೇ ಹಂತದಲ್ಲಿ ಬೆಳವಣಿಗೆಯಾಗಿದ್ದು ನಾಣ್ಯಗಳು, ಬಳೆಗಳು, ಮಡಕೆ ತುಂಡುಗಳು ಮುಂತಾದ ಅವಶೇಷಗಳು ದೊರೆತಿರುವುದನ್ನು ಚಿತ್ರ ಸಹಿತ ಮಂಡಿಸಿದರು.

ಸುಲೋಚನ ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿದರು. ವಿದುಷಿ ಉಮಾಶಂಕರಿ ಕನಕ ಕೀರ್ತನೆ ಹಾಡಿದರು. ದಿವ್ಯಶ್ರೀ ಬಳಗದವರಿಂದ ಕನಕಗಾಯನ ಕಾರ್ಯಕ್ರಮ ನಡೆಯಿತು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಪ್ರೊ.ಮೇಟಿ ಮುದಿಯಪ್ಪ ಉಸಸ್ಥಿತರಿದ್ದರು. ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಪ್ರಸ್ತಾವಿಸಿದರು. ಕನಕದಾಸ ಅಧ್ಯಯನ ಪೀಠದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ವಂದಿಸಿದರು.