ಕಾನಹೊಸಹಳ್ಳಿ: ಸಮಾಜದ ಒಳಿತಿಗಾಗಿ ಸತ್ಕಾರ್ಯ ಮಾಡುವವರಿಗೆ ಪುಣ್ಯಪ್ರಾಪ್ತಿಯಾಗಲಿದೆ. ಸರ್ವಜನರ ಶ್ರೆಯೋಭಿವೃದ್ದಿಗೆ ಸಮಾಜಮುಖಿಯಾಗಿ ಶ್ರಮಿಸಿದಾಗ ಶಿವ ಮೆಚ್ಚುತ್ತಾನೆ ಎಂಬುದನ್ನು ಅರಿಯಬೇಕಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ತಿಳಿಸಿದರು.
ಸಮೀಪದ ಟಿ.ಸೂರವ್ವಹಳ್ಳಿ ಗ್ರಾಮದ ಶಕ್ತಿದೇವತೆ ಮಲಿಯಮ್ಮದೇವಿಯ ದೇವಸ್ಥಾನದ ಕಳಸಾರೋಹಣ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಧಾರ್ಮಿಕ ಆಚರಣೆ, ಪರಂಪರೆ ಸನಾತನ ಕಾಲದಿಂದಲೂ ಇದೆ. ಅದನ್ನು ಪಾಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸಮಾಜದ ಒಳಿತಿಗಾಗಿ ಎಲ್ಲರೂ ಶ್ರಮಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ಕಲಿಸುವುದರೊಂದಿಗೆ ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಗೆ ಪ್ರತಿಯೊಬ್ಬ ಪಾಲಕರ ಮೇಲಿದೆ. ನಾಡಿನ ಮಠಮಾನ್ಯಗಳು ಗುರುಶಿಷ್ಯ ಪರಂಪರೆಯಿಂದಾಗಿ ಪುರಾತನ ಕಾಲದಿಂದಲೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಉಚಿತವಾಗಿ ಶಿಕ್ಷಣ ನೀಡುತ್ತಾ ಬಂದಿವೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು.