ಕಾನಹೊಸಹಳ್ಳಿಯ ಬಿಸಿಎಂ ವಸತಿ ನಿಲಯಕ್ಕೆ ಸೋಮವಾರ ಮಕ್ಕಳ ಹಕ್ಕುಗಳ ಅಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ ಪರಿಶೀಲಿಸಿದರು.ಅಧಿಕಾರಿಗಳಾದ ನಾಗನಗೌಡ, ಪಂಪಾಪತಿ, ನಿಲಯ ಮೇಲ್ವಿಚಾರಕ ರಾಚಯ್ಯ ಇದ್ದರು. 
ಜಿಲ್ಲೆ

ಅಕ್ಕಿ, ಹೆಸರು ಕಾಳು ಮಾದರಿ ಸಂಗ್ರಹಿಸಿದ ಶಶಿಧರ ಕೋಸಂಬೆ

ನರೇಶ್ ಕುಮಾರ್

ಕಾನಹೊಸಹಳ್ಳಿ: ವಿವಿಧ ಹಾಸ್ಟೆಲ್‌ಗಳಿಗೆ ಸೋಮವಾರ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ, ನೀಡಿ ಪರಿಶೀಲನೆ ನಡೆಸಿದರು.

ಚಿಕ್ಕಜೋಗಿಹಳ್ಳಿಯ ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಆಹಾರ ಪದಾರ್ಥಗಳನ್ನು ಪರಿಶೀಲಿಸಿದ ನಂತರ ಹೆಸರು ಕಾಳು ಹಾಗೂ ಎಲ್ಲ ಅಕ್ಕಿ ಸ್ಯಾಂಪಲ್‌ಗಳೇ ಬೇರೆ ಇದೆ ಎಂದ ಅವರು, ಎರಡರ ಮಾದರಿ ಸಂಗ್ರಹಿಸಿಕೊಂಡರು. ಅಡುಗೆ ಕೋಣೆಗೆ ಭೇಟಿ ನೀಡಿದ ನಂತರ ಕೊಳೆತ್ತಿದ್ದ ತರಕಾರಿ ನೋಡಿ ಸಿಬ್ಬಂದಿಯನ್ನು ಕೋಸಂಬೆ ತರಾಟೆಗೆ ತೆಗೆದುಕೊಂಡರು.

ಬಣವಿಕಲ್ಲು ಗ್ರಾಮದ ಕಸ್ತೂರಿ ಬಾ ಬಾಲಕಿಯರ ವಸತಿ ನಿಲಯದಲ್ಲಿ ನೀರು ಪೂರೈಕೆ ತೊಟ್ಟಿ ಪಾಚಿಗಟ್ಟಿರುವುದನ್ನು ನೋಡಿದ ಶಶಿಧರ, ನೀರು ಬಳಕೆಗೆ ಯೋಗ್ಯವಿಲ್ಲ. ಸ್ವಚ್ಛಗೊಳಿಸಬೇಕು ಎಂದು ಮುಖ್ಯಶಿಕ್ಷಕಿ ವೀಣಾ ಅವರಿಗೆ ತಾಕೀತು ಮಾಡಿದರು.

ಶಾಲೆಯಲ್ಲಿ ದೂರು ಪೆಟ್ಟಿಗೆ ಇಲ್ಲದಿರುವುದು, ಸಿಸಿ ಟಿವಿ ದುರಸ್ತಿ, ಶುದ್ಧ ಕುಡಿವ ನೀರು ಪರಿಶೀಲಿಸಿದರು. ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ಸಭೆ ನಡೆಯುತ್ತಿಲ್ಲ. ಸಂವಿಧಾನ ಪೀಠಿಕೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕಡ್ಡಾಯವಾಗಿ ಬರೆಸಬೇಕೆಂದು ಸೂಚಿಸಿದರು.

ಹತ್ತಿರದ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. ಶಾಲೆ ಸುತ್ತಲಿನ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕೆಂದು ಮುಖ್ಯಶಿಕ್ಷಕ ತಿಪ್ಪೇಸ್ವಾಮಿಗೆ ಸೂಚಿಸಿದರು. ಅಂಗನವಾಡಿಯಲ್ಲಿ ಹಾಜರಾತಿ ಪುಸ್ತಕ ಮನೆಯಲ್ಲಿಟ್ಟು ಬಂದ ಕಾರ್ಯಕರ್ತೆ ರೇಖಾ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಮಕ್ಕಳ ಆರೋಗ್ಯ ಪುನಶ್ಚೇತನ ಕೇಂದ್ರದಲ್ಲಿ ಆಹಾರ ಪದಾರ್ಥ ಖಾಲಿ
ಚಿಕ್ಕಜೋಗಿಹಳ್ಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಾಲಕರ ವಸತಿ ನಿಲಯದಲ್ಲಿ ಶುದ್ಧ ಕುಡಿವ ನೀರು ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ದಾಸ್ತಾನು ವಿವರ ಮತ್ತು ವಿದ್ಯಾರ್ಥಿಗಳ ಹಾಜರಾತಿ ಮಾಹಿತಿ ನೀಡಲು ತಡವರಿಸಿದ ಮೇಲ್ವಿಚಾರಕ ಮಲ್ಲಿಕಾರ್ಜುನ ವಿರುದ್ಧ ಹರಿಹಾಯ್ದರು.

ತಾಲೂಕು ಸಹಾಯಕ ನಿರ್ದೇಶಕ ಪಂಪಾಪತಿ ಅವರಿಗೆ ನೀವೇನು ಮಾಡುತ್ತೀರಾ? ಅಗಾಗ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಶಶಿಧರ ಸೂಚಿಸಿದರು. ಬಹುತೇಕ ವಸತಿ ನಿಲಯಗಳಲ್ಲಿ ಶುದ್ಧ ಕುಡಿವ ನೀರು ಹಾಗೂ ಜಿಲ್ಲೆಯ ಹೆಸರು ವಿಜಯನಗರ ಎಂದು ಬರೆಸಿಲ್ಲ. ಅಧಿಕಾರಿಗಳ ಸಭೆ ನಡೆಸಿ, ಸಮಸ್ಯೆ ಕಂಡು ಬಂದ ಹಾಸ್ಟೆಲ್ ವಾರ್ಡನ್‌ಗಳಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.

ಕಾನಹೊಸಹಳ್ಳಿಯ ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡ್ಲಿಗಿಯ ಸಿಡಿಪಿಒ ನಾಗನಗೌಡ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಪಂಪಾಪತಿ ಇದ್ದರು.