ಕಾನಹೊಸಹಳ್ಳಿ: ಕೃಷಿ ಸಹಕಾರ ಸಂಘಗಳಿಗೆ ಆಯ್ಕೆಯಾಗಿರುವ ಸದಸ್ಯರು ಆಸಕ್ತಿಯಿಂದ ಕೆಲಸ ಮಾಡುವುದರ ಜತೆಗೆ ರೈತರಿಗೆ ನೆರವಾಗಬೇಕೆಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಚಿಕ್ಕಜೋಗಿಹಳ್ಳಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್, ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ವಿಜಯನಗರ ಮತ್ತು ಬಳ್ಳಾರಿ ಸಹಕಾರ ಇಲಾಖೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಆಯ್ಕೆಯಾದ ನಿರ್ದೇಶಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಾನು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದು, ರೈತರ ನೆರವಿಗಾಗಿ ತಾಲೂಕಿಗೆ ಕೃಷಿ ವಿಜ್ಞಾನ ಕೇಂದ್ರವನ್ನು ಮಂಜೂರು ಮಾಡಿಸಲು ಶ್ರಮಿಸಿದ್ದೇನೆ. ಸಹಕಾರ ಸಂಘಗಳು ಸಹ ರೈತರ ಪರವಾಗಿ ಕಾರ್ಯನಿರ್ವಹಿಸಿ ಅವರ ಅಭಿವೃದ್ಧಿಗೆ ಶ್ರಮಿಸಲಿ ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ ಮಾತನಾಡಿ, ಸಹಕಾರ ಸಂಘಗಳಿಗೆ ಆಯ್ಕೆಯಾಗಿರುವ ಸದಸ್ಯರೆಲ್ಲ ಸಹಕಾರ ತತ್ವದಡಿ ಕೆಲಸ ನಿರ್ವಹಿಸಬೇಕು. ಯಾವುದೇ ಆಸೆ, ಆಕಾಂಕ್ಷೆಗೆ ಒಳಗಾಗದೆ ರೈತರ ಸೇವೆ ಮಾಡಬೇಕು. ರೈತರ ಕಷ್ಟಕ್ಕೆ ಸಹಾಯ ಮಾಡುವುದು ದೇವರ ಸೇವೆಯಷ್ಟೇ ಶ್ರೇಷ್ಠ ಎಂಬುದನ್ನು ಎಲ್ಲರೂ ಭಾವಿಸಬೇಕು ಎಂದು ಹೇಳಿದರು.
ಮಿದುಳಿನಂತೆ ಆಡಳಿತ ಮಂಡಳಿ, ಹೃದಯದಂತೆ ಸಿಇಒಗಳು ಕೆಲಸ ಮಾಡಿದಾಗ ಅಂಗಗಳಂತೆ ರೈತರು ಕ್ರಿಯಾಶೀಲವಾಗಿ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುವುದರಲ್ಲಿ ಸಂದೇಹವಿಲ್ಲ. ಸಹಕಾರ ಸಂಘಗಳ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಷೇರು, ಪಿಗ್ಮಿ, ಠೇವಣಿ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ನಬಾರ್ಡ್ ಸಹಕಾರದಿಂದ ರೈತರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕು ಎಂದು ಕೆ.ತಿಪ್ಪೇಸ್ವಾಮಿ ತಿಳಿಸಿದರು.
ಆಡಳಿತ ಮಂಡಳಿ ನಿರ್ದೇಶಕರ ಜವಾಬ್ದಾರಿ, ಕರ್ತವ್ಯ ಹಾಗೂ ಸಹಕಾರ ಸಂಘಗಳ ಕಾಯ್ದೆ ಕುರಿತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧಿಕಾರಿ ಬೆಂಗಳೂರಿನ ಡಾ. ಎನ್.ಎಂ.ಶಿವಕುಮಾರ್, ವೃತ್ತಿ ಕೌಶಲ ಹಾಗೂ ಒತ್ತಡ ನಿರ್ವಹಣೆ ಕುರಿತು ಸಂಪನ್ಮೂಲ ವ್ಯಕ್ತಿ ಗಿರಿಧರ ಪೂಜಾರಿ ಹಾಗೂ ರಾಜ್ಯ ಸಹಕಾರ ಮಹಾಮಂಡಳ ಕಾರ್ಯಚಟುವಟಿಕೆ ಕುರಿತು ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ಸಿಇಒ ನಾಗರಾಜ ಉಪನ್ಯಾಸ ನೀಡಿದರು.
ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಪ್ರಮುಖರಾದ ಜಿಂಕಲ್ ನಾಗಮಣಿ, ಕೆ.ಜಿ.ಕಮಾರಗೌಡ, ಸಿದ್ದಪ್ಪ, ಕೆ.ನಾಗರಾಜ, ಚಿಕ್ಕಜೋಗಿಹಳ್ಳಿ ಸಹಕಾರ ಸಂಘದ ಸಿಇಒ ಪಂಪಾಪತಿ, ಕೊಟ್ರೇಶ್, ಕನಕಪ್ಪ, ಮರೇಗೌಡ ಇತರರಿದ್ದರು.