ಕಾನಹೊಸಹಳ್ಳಿ: ಕ್ಷೇತ್ರದಲ್ಲಿ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಉತ್ತಮ ಆಸ್ಪತ್ರೆಗಳ ನಿರ್ಮಾಣದೊಂದಿಗೆ ತಜ್ಞ ವೈದ್ಯರು ಕಾರ್ಯ ನಿರ್ವಹಿಸುವಂತಾಗಲು ಕ್ರಮ ವಹಿಸಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ನರಸಿಂಹನಗಿರಿ ಗ್ರಾಮದಲ್ಲಿ ಶಾಸಕರ ಕುಟುಂಬದಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಗುಡೇಕೋಟೆ ಹೋಬಳಿ ವ್ಯಾಪ್ತಿಯ ಗರ್ಭಿಣಿಯರಿಗೆ ಸೀಮಂತ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ಕ್ಷೇತ್ರದ ಹಳ್ಳಿಗಳಲ್ಲಿ ಸಾಕಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದು, ಆರೋಗ್ಯ ಇಲಾಖೆ ವೈದ್ಯರು, ನರ್ಸ್‌ಗಳು ನೀಡುವ ಸಲಹೆ ಪಾಲಿಸಬೇಕು. ಗರ್ಭಿಣಿಯರು ಮಗುವಿನ ಆರೋಗ್ಯ ಮತ್ತು ಉತ್ತಮ ಬೆಳವಣಿಗೆ ದೃಷ್ಟಿಯಿಂದ ವೈದ್ಯರು ನೀಡುವ ಚಿಕಿತ್ಸೆ ಪಡೆಯುವುದರ ಜತೆಗೆ ಸಲಹೆಗಳನ್ನು ಅನುಸರಿಸಬೇಕಿದೆ ಎಂದರು.
ಶಾಸಕರ ಸಹೋದರ ಎನ್.ಟಿ.ತಮ್ಮಣ್ಣ ಮಾತನಾಡಿ, ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನಮ್ಮ ಕುಟುಂಬದಿಂದ ಗರ್ಭಿಣಿಯರಿಗೆ ಉಡಿತುಂಬಿ ಹಾರೈಸಲು ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಗರ್ಭಿಣಿಯರು ಸೇರಿದಂತೆ ಎಲ್ಲರ ಆರೋಗ್ಯ ಕಾಳಜಿ ವಹಿಸುವ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸುವುದು ಹೆಮ್ಮೆಯ ಕಾರ್ಯವಾಗಿದೆ ಎಂದರು.