ಜಿಲ್ಲೆ

ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ


ಕಾನಹೊಸಹಳ್ಳಿ: ಕಂಚೋಬನಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತು ಒಂದೇ ಮನೆಯ ಮೂವರು ಶನಿವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಾರಪ್ಪ, ಈತನ ಮಕ್ಕಳಾದ ರಮೇಶ್ ಮತ್ತು ಚಂದನಾ ಆತ್ಮಹತ್ಯೆಗೆ ಯತ್ನಿಸಿದವರು. ಚಿಕ್ಕಜೋಗಿಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಕೂಡ್ಲಿಗಿಗೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‌ಗೆ ಕಳಿಸಲಾಗಿದೆ. ಕಂಚೋಬನಹಳ್ಳಿಯ ಮಾರಪ್ಪ ಜತೆಗೆ ಪತ್ನಿ ಜಗಳವಾಡಿ ಆಕೆಯ ತಮ್ಮನ ಜತೆ ಹೋಗಿದ್ದಲ್ಲದೆ, ಫೆ.6ರಂದು ಕಾನಹೊಸಹಳ್ಳಿ ಠಾಣೆಯಲ್ಲಿ ಗಂಡನ ವಿರುದ್ಧ ದೂರು ನೀಡಿದ್ದರು.

ಪೊಲೀಸರು ಗಂಡ, ಹೆಂಡತಿಗೆ ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಆದರೆ ಪತ್ನಿ ಮನೆಗೆ ಹೋಗಿಲ್ಲ. ಇದರಿಂದ ಬೇಸತ್ತು ಪತಿ ಮಾರಪ್ಪ, ಇಬ್ಬರು ಮಕ್ಕಳು ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.