ಗುಡೇಕೋಟೆ ಸಮುದಾಯ ಭವನದಲ್ಲಿ ಸ್ಫೂರ್ತಿ ಮಹಿಳಾ ಸಹಕಾರ ಸಂಘದಿಂದ ಶನಿವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನಕಾರ್ಯಕ್ರಮವನ್ನು ವಕೀಲೆ ಜಿ.ಕೆ.ರೇಖಾ ಉದ್ಘಾಟಿಸಿದರು. ವಿಶಾಲಾಕ್ಷಿ ರಾಜಣ್ಣ, ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಪಿಡಿಒ ಬಸಮ್ಮ ಇದ್ದರು. 
ಜಿಲ್ಲೆ

ಲಿಂಗ ಭೇದವಿಲ್ಲದೆ ಸಮಾನತೆಯಿಂದ ಕಾಣಿ - ತಾಪಂ ಮಾಜಿ ಉಪಾಧ್ಯಕ್ಷೆ ವಿಶಾಲಾಕ್ಷಿ ಆಶಯ

ಕಾನಹೊಸಹಳ್ಳಿ: ಕ್ರೀಡೆ, ಸಾಹಿತ್ಯ, ರಾಜಕೀಯ, ವಿಜ್ಞಾನ, ಬಾಹ್ಯಾಕಾಶ ಸೇರಿದಂತೆ ಎಲ್ಲ ರಂಗದಲ್ಲೂ ಪುರುಷರಷ್ಟೇ ಸಾಧನೆ ಮಾಡುವ ಮಹಿಳೆಯರಿಗೆ ಸಮಾನತೆ ಸಿಗಲಿ ಎಂದು ಸ್ಫೂರ್ತಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಹಾಗೂ ತಾಪಂ ಮಾಜಿಉಪಾಧ್ಯಕ್ಷೆ ವಿಶಾಲಾಕ್ಷಿ ರಾಜಣ್ಣ ತಿಳಿಸಿದರು.

ಗುಡೇಕೋಟೆ ಸಮುದಾಯ ಭವನದಲ್ಲಿ ಸ್ಫೂರ್ತಿ ಮಹಿಳಾ ಸಹಕಾರ ಸಂಘದಿಂದ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಮೊದಲು ಮಹಿಳೆಯರಿಗೆ ಶಿಕ್ಷಣ ನೀಡಿದ ಸಾವಿತ್ರಿಬಾಯಿ ಫುಲೆ, ಇಡೀ ದೇಶದ ಆರ್ಥಿಕತೆಯ ಕುರಿತು ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್ ಸ್ತ್ರೀಕುಲದ ಹೆಮ್ಮೆ. ಹೆಣ್ಣು ಭ್ರೂಣಹತ್ಯೆ, ಬಾಲ್ಯವಿವಾಹ, ಬಾಲ ಕಾರ್ಮಿಕತೆ ಹೋಗಲಾಡಿಸಲು ಸಂವಿಧಾನದ ಆಶಯ, ಕಾನೂನು ಪಾಲನೆ ಮುಖ್ಯವಾಗಲಿದೆ. ಮನೆಯಲ್ಲಿ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡಿ, ಗಂಡು-ಹೆಣ್ಣು ಭೇದವಿಲ್ಲದೆ ಸಮಾನತೆಯಿಂದ ಕಾಣಬೇಕು ಎಂದರು.

ವಕೀಲೆ ಜಿ.ಕೆ.ರೇಖಾ ಮಾತನಾಡಿ, ಹೆಣ್ಣು ಭ್ರೂಣಹತ್ಯೆಯಿಂದಾಗಿ ಸಮಾಜದಲ್ಲಿ ಗಂಡು ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗದಂಥ ಸ್ಥಿತಿ ನಿರ್ಮಾಣವಾಗಿದೆ. ಬಾಲಕಿಯರಿಗೆ ಮದುವೆ ಮಾಡಿಸುವಂಥ ಅನಿಷ್ಠ ಪದ್ಧತಿಯನ್ನು ಪ್ರತಿಯೊಬ್ಬರೂ ತಡೆಯಬೇಕು. ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡಬೇಕಿದ್ದು, ಸಂಬಂಧಗಳನ್ನು ಹಾಳು ಮಾಡಿಕೊಳ್ಳಬಾರದು ಎಂದು ತಿಳಿಸಿದರು.

ಸೋಬಾನೆ ಹಾಡುಗಾರ್ತಿಯರು, ಸೂಲಗಿತ್ತಿಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಮಹಿಳೆಯರಿಗಾಗಿ ಸ್ಫೂರ್ತಿ ಮಹಿಳಾ ಸಹಕಾರ ಸಂಘದಿಂದ ಆಯೋಜಿಸಿದ್ದ ನಾನಾ ಕ್ರೀಡೆ, ಇತರ ಚಟುವಟಿಕೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸೋಬಾನೆ ಗಾಯನ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಪಿಡಿಒ ಬಸಮ್ಮ, ಆರೋಗ್ಯ ಇಲಾಖೆಯ ಮಂಜುಳಾ, ರೇಣುಕಾ ಗಜಾಪುರ, ಗ್ರಾಪಂ ಸದಸ್ಯರಾದ ಲಲಿತಮ್ಮ ಗೋವಿಂದಪ್ಪ, ಬೊಮ್ಮಣ್ಣ, ಮೀನಾಕ್ಷಿ, ಸರಸ್ವತಿ, ಸಣ್ಣಕ್ಕ, ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ರುಕ್ಮಿಣಿಬಾಯಿ, ಸಹಕಾರ ಸಂಘದ ನಿರ್ದೇಶಕರಾದ ವಿಶಾಲಾಕ್ಷಿ, ಪುಟ್ಟಮ್ಮ, ಎಂ.ಟಿ.ಕವಿತಾ, ಕರವೇ ಹೋಬಳಿ ಅಧ್ಯಕ್ಷ ಶಿವಕುಮಾರ್, ಮನೋಹರ ಹೆಗಡೆ ಇತರರಿದ್ದರು.