ಗುಡೇಕೋಟೆಯಲ್ಲಿ ಒನಕೆ ಓಬವ್ವ ಉತ್ಸವ ನಿಮಿತ್ತ ಕನ್ನಡ ಸಂಸ್ಕೃತಿ ಇಲಾಖೆ ಹಾಗು ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ‘ಗುಡೇಕೋಟೆ ಪಾಳೇಗಾರರು ಮತ್ತು ಒನಕೆ ಓಬವ್ವ’ ವಿಚಾರ ಸಂಕಿರಣವನ್ನು ಪ್ರೊ.ಲಕ್ಷಣ್ ತೆಲಗಾವಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಪ್ರಾಧ್ಯಾಪಕರಾದ ಅಮರೇಶ ಯತಗಲ್, ಆರ್.ಎಂ.ಷಡಕ್ಷರಯ್ಯ, ಡಾ.ಶೇಜೇಶ್ವರ ಇದ್ದರು.  
ಜಿಲ್ಲೆ

ನಿಖರ ಇತಿಹಾಸ ಕಟ್ಟಿಕೊಡಲಿ

ಭೀಮಸಮುದ್ರ ರಂಗನಾಥ

ಕಾನಹೊಸಹಳ್ಳಿ: ಒನಕೆ ಓಬವ್ವ ಹೆಸರಿನಲ್ಲಿ ಅನುದಾನ ಪಡೆಯುವ ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳು ಹೆಚ್ಚಾಗಿವೆ. ಆದರೆ, ಒನಕೆ ಓಬವ್ವ ಇತಿಹಾಸ ಕಟ್ಟಿಕೊಡುವಲ್ಲಿ ವಿಶ್ವವಿದ್ಯಾಲಯಗಳು ಮತ್ತು ಸಂಶೋಧಕರು ವಿಫಲರಾಗಿದ್ದಾರೆ ಎಂದು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಲಕ್ಷ್ಮಣ್ ತೆಲಗಾವಿ ಹೇಳಿದರು.

ಗುಡೇಕೋಟೆಯಲ್ಲಿ ಒನಕೆ ಓಬವ್ವ ಉತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಂಗಳವಾರ ಮಾತನಾಡಿದರು.

ಓಬವ್ವ ಕುರಿತು ಈಗಾಗಲೇ ಹಲವು ಲೇಖಕರು ಮತ್ತು ಸಂಶೋಧಕರು ಕೃತಿಗಳನ್ನು ಬರೆದಿದ್ದಾರೆ. ಗಂಡನ ಮನೆಯವರ ಮೂಲ ನೆಲೆ, ಸಾವು ಮತ್ತು ಸಮಾಧಿ ಬಗ್ಗೆ ನಿಖರ ಇತಿಹಾಸ ತಿಳಿಸುವಂತಹ ಸಂಶೋಧನೆ ನಡೆಯಬೇಕಿದೆ ಎಂದರು.

ಪ್ರಾಧ್ಯಾಪಕ ಡಾ.ಅಮರೇಶ್ ಯತಗಲ್ ಮಾತನಾಡಿ, ಗುಡೇಕೋಟೆ ಪಾಳೇಗಾರರ ಕೊಡುಗೆ ಆಪಾರವಾಗಿದೆ. ಒನಕೆ ಓಬವ್ವ ಇತಿಹಾಸದಲ್ಲಿ ಸ್ಥಾನ ಪಡೆಯಲು ಸ್ವಾಮಿನಿಷ್ಠೆ, ಸಮಯಪ್ರಜ್ಞೆ ಮತ್ತು ಚಾಕಚಕ್ಯತೆ, ತ್ಯಾಗ ಕಾರಣವಾಗಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಎಂ.ಷಡಕ್ಷರಯ್ಯ ಅವರು ಗುಡೇಕೋಟೆ ಸ್ಮಾರಕಗಳು, ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರು ಗುಡೇಕೋಟೆ ಅಭಿವೃದ್ಧಿ ಕುರಿತು ಮುನ್ನೋಟ, ಹಂಪಿ ವೃತ್ತದ ಪುರಾತತ್ವ ಇಲಾಖೆ ನಿರ್ದೇಶಕ ಡಾ.ಶೇಜೇಶ್ವರ ಅವರು ಗುಡೇಕೋಟೆ ಸ್ಮಾರಕಗಳ ಸಂರಕ್ಷಣೆ, ಉಪನ್ಯಾಸಕ ಓಬಯ್ಯ, ಗುಡೇಕೋಟೆಯ ಇತಿಹಾಸ ಮತ್ತು ಸಂಸ್ಕೃತಿ ಕುರಿತು ಮಾತನಾಡಿದರು. ಡಾ,ಕೊತ್ಲಮ್ಮ ಪ್ರಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಡಾ.ರಾಜಣ್ಣ, ನಾಗರಾಜ ಕೊಟ್ಟಪ್ಪಗಳ ಇದ್ದರು.

ಗುಡೇಕೋಟೆ ಸೂಕ್ಷ್ಮ, ನವ ಮತ್ತು ಬೃಹತ್ ಶಿಲಾಯುಗದ ನೆಲೆಯಾಗಿದ್ದು, ಈ ಪರಿಸರದಲ್ಲಿ 10ನೇ ಶತಮಾನದ ಸ್ಮಾರಕಗಳು ಇವೆ. ಇಲ್ಲಿನ ಸ್ಮಾರಕಗಳು ಧಾರ್ಮಿಕ ಮತ್ತು ಲೌಕಿಕ ಸ್ಮಾರಕಗಳಾಗಿ ವರ್ಗೀಕರಿಸಿ ಅಧ್ಯಯನ ಮಾಡುವುದರೊಂದಿಗೆ ಅವುಗಳ ಸಂರಕ್ಷಣೆಯ ಅಗತ್ಯವಿದೆ. | ಡಾ.ಆರ್.ಎಂ.ಷಡಕ್ಷರಯ್ಯ ಸಂಶೋಧಕ, ಧಾರವಾಡ ಗುಡೇಕೋಟೆಯಲ್ಲಿ ಒನಕೆ ಓಬವ್ವ ಉತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೊಸಪೇಟೆಯ ಅಂಜಲಿ ತಂಡದವರು ನೃತ್ಯ ಪ್ರದರ್ಶಿಸಿದರು.

ನಗುವಿನ ಕಡಲಲ್ಲಿ ತೇಲಾಡಿಸಿದ ಮಿಮಿಕ್ರಿ ಗೋಪಿ

ಖ್ಯಾತ ಕಲಾವಿದ ಮಿಮಿಕ್ರಿ ಗೋಪಿ ಮತ್ತು ತಂಡದ ಹಾಸ್ಯಕ್ಕೆ ಜನರು ನಗೆಗಡಲಲ್ಲಿ ತೇಲಾಡಿದರು. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವಾರು ನಾಯಕರ ಅನುಕರಣೆ ಜನರ ಮನಸೂರೆಗೊಂಡಿತು. ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಅಧಿಕಾರಿಗಳು ಹಾಗೂ ಪ್ರಮುಖರು ಕಾರ್ಯಕ್ರಮವನ್ನು ಕೊನೆವರೆಗೂ ವೀಕ್ಷಿಸಿದರು.

ಗುಡೇಕೋಟೆಯಲ್ಲಿ ಮೇಳೈಸಿದ ಸಾಂಸ್ಕೃತಿಕ ಸಂಗಮ

ಕಾನಹೊಸಹಳ್ಳಿ: ಗುಡೇಕೋಟೆಯಲ್ಲಿ ಒನಕೆ ಓಬವ್ವ ಉತ್ಸವ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೂರೆಗೊಂಡಿತು. ‘ಬಿಗ್‌ಬಾಸ್’ ವಿನ್ನರ್ ಹನುಮಂತ ಲಮಾಣಿ ತಂಡದ ಗೀತ ಗಾಯನ ಪ್ರೇಕ್ಷಕರ ತಲೆದೂಗುವಂತೆ ಮಾಡಿತು.

ಹೊಸಪೇಟೆಯ ಅಂಜಲಿ ತಂಡ, ಮರಿಯಮ್ಮನಹಳ್ಳಿಯ ವಿನಾಯಕ ಕಲಾ ಟ್ರಸ್ಟ್‌ನ ಭರತನಾಟ್ಯ, ಹಂಪಿಯ ರಂಜು ಆರ್ಟ್ಸ್ ತಂಡದ ಕಲಾತ್ಮಕ ಯೋಗ ನೃತ್ಯ ನೋಡುಗರನ್ನು ಮಂತ್ರಮುಗ್ಧಗೊಳಿಸಿತು.

ಕಾನಹೊಸಹಳ್ಳಿ ನಾಗೇಶ್ ಮತ್ತು ತಂಡದವರು ಹಾಡಿದ ದ.ರಾ.ಬೇಂದ್ರೆ ಅವರ ಶ್ರಾವಣ ಬಂತು ಗೀತೆಗೆ ಜನಸಮೂಹ ಚಪ್ಪಾಳೆ ತಟ್ಟಿ ಹುರುಪು ತುಂಬಿದರು. ಗೊಟಗೋಡಿಯ ಬಿ.ಎಚ್.ಆನಂದಪ್ಪ ತಂಡ ಜೋಗಿಪದ, ಮರಬನಹಳ್ಳಿ ಮಾರಪ್ಪ ತಂಡ ಲಾವಣಿ ಪದ, ಬಣಕಾರ ಕೊಟ್ರೇಶ ತಂಡ ರಂಗಗೀತೆ, ಹೊಸಪೇಟೆಯ ಲಕ್ಷ್ಮೀ ತಂಡ ಸುಗಮ ಸಂಗೀತ, ಮರಿಯಮ್ಮನಹಳ್ಳಿಯ ಎಸ್.ಶ್ರೀನಾಥ ತಂಡ ಜಾನಪದ ಗಾನಸುಧೆ ಕೇಳುಗರ ಕಿವಿಗೆ ಇಂಪು ನೀಡಿತು.

ಮೊರಬದ ಚಲುವಾದಿ ವೀರಣ್ಣ ಮತ್ತು ತಂಡದ ಶಹನಾಯಿ ವಾದನ, ಬಡೇಲಡುಕು ಗ್ರಾಮದ ಕಿಂಡ್ರಿ ಲಕ್ಷಿಪತಿ ತಂಡದ ಸುಡುಗಾಡುಸಿದ್ಧರ ಸಾಂಪ್ರದಾಯಿಕ ಜಾದೂ ಕಲೆಗೆ ಪ್ರೇಕ್ಷಕರು ಮೂಕವಿಸ್ಮಿತರಾದರು. ಜಂಬುನಾಥನಹಳ್ಳಿಯ ಶಂಕ್ರಪ್ಪ ಬಡಗಿ ತಂಡದ ಮೋರ್‌ಝಿಂಗ್ ವಿಶೇಷ ವಾದನ ಜನರಿಗೆ ಮುದ ನೀಡಿತು.

ಕಿಂಡ್ರಿ ಲಕ್ಷ್ಮಿಪತಿ ತಂಡ ಸುಡಗಾಡು ಸಿದ್ಧರ ಜಾದೂ ಪ್ರದರ್ಶನ ನೀಡಿತು.