ಕಾನಹೊಸಹಳ್ಳಿ: ಸಾಮಾನ್ಯ ಸಭೆ ಅನುಮೋದನೆ ಪಡೆಯದೆ ಗ್ರಾಪಂ ಅಧ್ಯಕ್ಷರು ಹಣ ಖರ್ಚು ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ದೂರುಗಳ ಪರಿಶೀಲನೆ ಹಾಗೂ ಸೂಕ್ತ ಕ್ರಮಕ್ಕಾಗಿ ತಾಲೂಕು ಮಟ್ಟದ ಅಧಿಕಾರಿಯನ್ನೊಳಗೊಂಡ ಸಮಿತಿ ರಚಿಸಬೇಕೆಂಬ ಸದಸ್ಯರ ಆಗ್ರಹಕ್ಕೆ ಗ್ರಾಪಂ ಸಭೆಯಲ್ಲಿ ಸಮ್ಮತಿ ನೀಡಲಾಯಿತು.
ಗ್ರಾಪಂ ಸಭಾಂಗಣದಲ್ಲಿ ತಾಪಂ ಇಒ ನರಸಪ್ಪ ನೇತೃತ್ವದಲ್ಲಿ ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎ.ಸಿ.ಚೇತನ್ ಈವರೆಗೆ ಯಾವುದೇ ಸ್ಥಾಯಿ ಸಮಿತಿ ರಚಿಸಿಲ್ಲ. ಸಾಮಾನ್ಯ ಸಭೆ ಅನುಮೋದನೆ ಪಡೆಯದೇ ಹಣ ಖರ್ಚು ಮಾಡುವುದು, ಆಯವ್ಯಯ ಮಂಡಿಸದೆ ತಮಗಿಷ್ಟ ಬಂದಂತೆ ಹಣ ಉಪಯೋಗಿಸುವುದು, ವಾರ್ಡ್ ಮತ್ತು ಗ್ರಾಮಸಭೆ ನಡೆಸದೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಅವಿಶ್ವಾಸ ಮಂಡಿಸಿದ್ದೇವೆ ಎಂದು ಶಿವಕುಮಾರ್, ಎಂ.ಹೊನ್ನೂರಪ್ಪ, ಎಚ್.ರಮೇಶ್, ಕೆ.ಜಿ.ಸಿದ್ಧನಗೌಡ, ನೀಲಮ್ಮ ಬೊಮ್ಮಯ್ಯ, ಕಲಾವತಿ ಸಿದ್ಧಲಿಂಗಪ್ಪ, ಲಕ್ಷ್ಮೀ ಚೌಡಪ್ಪ, ಮಕ್ಬುಲ್ ಖಾನ್ ಸೇರಿ 20ಕ್ಕೂ ಹೆಚ್ಚು ಸದಸ್ಯರು ಸಭೆಗೆ ತಿಳಿಸಿದರು.
ಅಧ್ಯಕ್ಷ ಎ.ಸಿ.ಚೇತನ್ ಮಾತನಾಡಿ, ಸದಸ್ಯರು ಸಾಮಾನ್ಯ ಸಭೆಗಳಿಗೆ ಗೈರಾಗುತ್ತಿದ್ದಾರೆ. ನನ್ನ ಗಮನಕ್ಕೆ ಬರದಂತೆ ಗ್ರಾಪಂನ ಕೆಲ ಬ್ಯಾಂಕ್ ಖಾತೆಗಳ ವ್ಯವಹಾರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ದೂರಿದರು.
ತಾಪಂ ಇಒ ನರಸಪ್ಪ ಮಾತನಾಡಿ, ಗ್ರಾಪಂನ ಬ್ಯಾಂಕ್ ಖಾತೆಗಳನ್ನು ಮುಂದಿನ ಆದೇಶದವರೆಗೆ ತಡೆಹಿಡಿಯುವಂತೆ ಧಾರವಾಡ ಹೈಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಸದಸ್ಯರ ಮನವಿ ಸಲ್ಲಿಕೆಯ ಕುರಿತು ದಾಖಲೆ ಪರಿಶೀಲಿಸಲು ತಾಲೂಕು ಮಟ್ಟದ ಅಧಿಕಾರಿಗಳ ಸಮಿತಿ ಯನ್ನು ಶೀಘ್ರವೇ ರಚಿಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಪಂ ವ್ಯವಸ್ಥಾಪಕ ವೈ.ಎಸ್.ಅಶ್ವತ್ಥಕುಮಾರ್, ಸಿಬ್ಬಂದಿ ಶ್ರೀಕಂಠಾಪುರ ವೆಂಕಟೇಶ್, ಚಿಕ್ಕಜೋಗಿಹಳ್ಳಿ ಮಾರುತಿ, ಪಿಡಿಒ ವಿನಯ್‌ಕುಮಾರ್, ಕಾರ್ಯದರ್ಶಿ ನಾಗರಾಜ, ಸಿಬ್ಬಂದಿ ಕೆ.ಜಿ.ನಾಗರಾಜ, ಶಶಿಕುಮಾರ್ ಇತರರಿದ್ದರು.