ಜಿಲ್ಲೆ

ಶ್ರೀ ಸುಂಕ್ಲಮ್ಮ ದೇವಿ ಜಾತ್ರೆಗೆ ಇಡೀ ಊರು ಖಾಲಿ, ತಮ್ಮಯ್ಯಗುಡ್ಡ ಗ್ರಾಮದ ಜನರ ವಿಶಿಷ್ಠ ಆಚರಣೆ

ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೋತ್ಸವ | ಹೊರವಲಯದ ಮರದ ಕೆಳಗೆ ಹಬ್ಬದೂಟ ಸವಿದು ಸಂಜೆ ಹಳ್ಳಿಗೆ ವಾಪಸ್

ಕಾನಹೊಸಹಳ್ಳಿ: ಜಾತ್ರೆ ಎಂದರೆ ಹಳ್ಳಿಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಆದರೆ, ಇಲ್ಲೊಂದು ಹಳ್ಳಿಯಲ್ಲಿ ಮಂಗಳವಾರ ಜನರು, ಗ್ರಾಮದೇವತೆ ಸಹಿತ ದನಕರು, ಮಕ್ಕಳು, ಗಂಟುಮೂಟೆಯೊಂದಿಗೆ ಊರು ಖಾಲಿ ಮಾಡಿ, ಗ್ರಾಮದ ನಾಲ್ಕು ದಿಕ್ಕಿಗೆ ಬೇಲಿ ಹಾಕಿದ್ದರು..!

ಇದು, ಸಮೀಪದ ತಮ್ಮಯ್ಯಗುಡ್ಡ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ಸುಂಕ್ಲಮ್ಮ ದೇವಿ ಜಾತ್ರೆ ವಿಶೇಷತೆ. ಗ್ರಾಮದಲ್ಲಿ ಬೇಡ, ಬುಡಕಟ್ಟು, ದಲಿತರು ಹಾಗೂ ಮೂರು ಮುಸ್ಲಿಂ ಕುಟುಂಬಗಳು ಸೇರಿ 150ಕ್ಕೂ ಮನೆಗಳಿದ್ದು, ಎಲ್ಲ ಸಮುದಾಯದವರು ಭಾವೈಕ್ಯತೆಯಿಂದ ಶ್ರೀ ಸುಂಕ್ಲಮ್ಮ ದೇವಿ ಜಾತ್ರೆಯಲ್ಲಿ ಭಾಗವಹಿಸುವುದು ವಿಶೇಷ. ಮಂಗಳವಾರ ಮೂಡಣ ದಿಕ್ಕಿನಲ್ಲಿ ನೇಸರ ಮೇಲೆ ಬರುತ್ತಲೆ ಊರಿನ ಜನರು ದನಕರುಗಳೊಂದಿಗೆ ಗ್ರಾಮ ಹೊರವಲಯದ ಹಳ್ಳದ ದಂಡೆಯಲ್ಲಿರುವ ಬೇವಿನಮರದ ಪ್ರದೇಶಕ್ಕೆ ತೆರಳಿದರು. ಮರದ ಕೆಳಗಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಬಳಿಕ ಗ್ರಾಮಸ್ಥರು ದನಕರುಗಳಿಗೆ ಚರಗ ಚೆಲ್ಲಿದರು. ಆನಂತರ ಕೆಂಡಾರಾಧನೆ ನಡೆಯಿತು. ಮಹಿಳೆಯರು ಪುಟ್ಟಿಯಲ್ಲಿ ತಂದಿದ್ದ ಹಬ್ಬದೂಟ ಸವಿದು ಸಂಭ್ರಮಿಸಿದರು. ಸಂಜೆ ಸೂರ್ಯಾಸ್ತನಾಗುತ್ತಿದ್ದಂತೆ ಗ್ರಾಮಸ್ಥರು ಊರಿನತ್ತ ಹೆಜ್ಜೆ ಹಾಕಿದರು.

ಆಚರಣೆಗೆ ಕಾರಣವೇನು?: ಜಾತ್ರೆ ನಿಮಿತ್ತ ಮಂಗಳವಾರ ಗ್ರಾಮದಲ್ಲಿ ನಿಶ್ಯಬ್ಧ ಮನೆ ಮಾಡಿತ್ತು. ಊರಿನ ಮೇಲೆ ಯಾವುದೇ ದುಷ್ಟಶಕ್ತಿ ಕಣ್ಣು ಹಾಗೂ ಪ್ಲೇಗ್, ಕಾಲರಾ ಸೇರಿ ಮಾರಕ ರೋಗಗಳು ಹರಡಬಾರದು. ಊರನ್ನು ಸ್ವಚ್ಫವಾಗಿಡಬೇಕು ಎಂಬುದು ಸುಂಕ್ಲಮ್ಮ ದೇವಿ ಆಚರಣೆಯ ಉದ್ದೇಶ ಎಂಬುದು ಗ್ರಾಮಸ್ಥರ ನಂಬಿಕೆ.

ಪೂರ್ವಜರ ಕಾಲದಿಂದಲೂ ಸಂಪ್ರದಾಯದಂತೆ ಸುಂಕ್ಲಮ್ಮ ದೇವಿ ಜಾತ್ರೆ ಆಚರಿಸಿಕೊಂಡು ಬರಲಾಗುತ್ತಿದೆ. ಒಂದು ದಿನದ ಮಟ್ಟಿಗೆ ಗ್ರಾಮ ಖಾಲಿ ಮಾಡುತ್ತೇವೆ. ಸಂಜೆಯವರೆಗೆ ಗ್ರಾಮದೊಳಗೆ ಯಾರು ಪ್ರವೇಶ ಮಾಡದಂತೆ ಬೇಲಿ ಹಾಕಲಾಗುತ್ತದೆ. | ನುಂಕಪ್ಪ, ಪ್ರಲ್ಹಾದ್ ತಮ್ಮಯ್ಯಗುಡ್ಡ ಗ್ರಾಮಸ್ಥರು