ಕಂಪ್ಲಿ: ವಿಶ್ವಕರ್ಮ ಸಮುದಾಯದವರು ಸಂಘಟಿತರಾಗಿ ರಾಜಕೀಯ ಪ್ರಾತಿನಿಧ್ಯ ಪಡೆಯಲು ಮುಂದಾಗಬೇಕು ಎಂದು ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ಸುಜ್ಞಾನಮೂರ್ತಿ ಹೇಳಿದರು.
ಪಟ್ಟಣದ ಕಾಳಿಕಾಮಠೇಶ್ವರ ದೇವಸ್ಥಾನದಲ್ಲಿ ವಿಶ್ವಕರ್ಮ ಸಂಘದಿಂದ ಆಯೋಜಿಸಿದ್ದ ಸಭೆಯಲ್ಲಿ ಬುಧವಾರ ಮಾತನಾಡಿದರು. ವಿಶ್ವಕರ್ಮ ಸಮುದಾಯದವರು ಪಾರಂಪರಿಕ ಪಂಚ ಕಸುಬುಗಳ ಜ್ಞಾನದೊಂದಿಗೆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ವಿಶ್ವಕರ್ಮ ನಿಗಮದಿಂದ ವಸತಿಹೀನರಿಗೆ ವಸತಿ ಕಲ್ಪಿಸುವುದು, ವಿಶ್ವಕರ್ಮ ನಿಗಮಕ್ಕೆ 100 ಕೋಟಿ ರೂ. ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗುವುದು ಎಂದರು.
ರಾಜ್ಯ ವಿಶ್ವಕರ್ಮ ಸಮಾಜದ ಸಹ ಕಾರ್ಯದರ್ಶಿ ಡಿ.ಮೌನೇಶ ಮಾತನಾಡಿ, ಚಿನ್ನ ಬೆಳ್ಳಿ ಕೆಲಸಗಾರರಿಗೆ ಎದುರಾಗುವ ವೃತ್ತಿ ಸಂಬಂಧಿಸಿದ ತೊಂದರೆ ನಿವಾರಿಸುವಲ್ಲಿ, ಸಾಲ, ವಸತಿ, ನಿವೇಶನ ನಾನಾ ಸೌಲಭ್ಯ ಒದಗಿಸುವಲ್ಲಿ ನಿಗಮ ಮುಂದಾಗಬೇಕು ಎಂದರು.
ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಡಿ.ಎ.ರುದ್ರಪ್ಪಾಚಾರ್, ಮಹಿಳಾ ಘಟಕದ ಅಧ್ಯಕ್ಷೆ ಡಿ.ವೀಣಾ ಮೌನೇಶ, ಪ್ರಮುಖರಾದ ಚಂದ್ರಶೇಖರಾಚಾರ್, ಗುರುಮೂರ್ತಿ, ಕಾಳಾಚಾರ್, ಶಶಿಧರ, ರಾಘವೇಂದ್ರ, ನಾರಾಯಣಾಚಾರ್, ವಿಶ್ವಕರ್ಮ ಮಹಿಳಾ ಸಂಘದ ಪದಾಧಿಕಾರಿಗಳು ಇತರರಿದ್ದರು.