ಕಂಪ್ಲಿಯಲ್ಲಿ ಆಯೋಜಿಸಿದ್ದ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನದ ಕಾರ್ಯಾಗಾರದಲ್ಲಿ ನವದೆಹಲಿಯ ಜೆಜೆಎಂ ಮುಖ್ಯಸಲಹೆಗಾರ ಡಾ.ಜಿ.ಅಚ್ಯುತರಾವ್ ಮಾತನಾಡಿದರು.  
ಜಿಲ್ಲೆ

ಗ್ರಾಮಾಡಳಿತ ನೀರು ಬಳಕೆಯ ಜಾಗೃತಿ ಮೂಡಿಸಲಿ- ಜೆಜೆಎಂ ಮುಖ್ಯಸಲಹೆಗಾರ ಡಾ.ಜಿ.ಅಚ್ಯುತರಾವ್ ಸಲಹೆ

ಕಂಪ್ಲಿ: ನೀರನ್ನು ಸಮರ್ಪಕವಾಗಿ ಬಳಸುವಲ್ಲಿ ಗ್ರಾಮಾಡಳಿತ ಎಚ್ಚರಿಕೆವಹಿಸಬೇಕು ಎಂದು ನವದೆಹಲಿಯ ಜೆಜೆಎಂ ಮುಖ್ಯಸಲಹೆಗಾರ ಡಾ.ಜಿ.ಅಚ್ಯುತರಾವ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಬಳ್ಳಾರಿಯ ಜಿಪಂ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗಗಳ ಸಹಯೋಗದಲ್ಲಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಕುರಿತು ಪಿಡಿಒ, ಗ್ರಾಪಂ ಸಿಬ್ಬಂದಿ, ಚುನಾಯಿತ ಪ್ರತಿನಿಧಿಗಳು, ಗ್ರಾಮ ನೀರು ನೈರ್ಮಲ್ಯ ಸಮಿತಿ ಸದಸ್ಯರು, ಕೆಳ ಶ್ರಮಿಕ ವರ್ಗಗಳ ಸದಸ್ಯರ ಕಾರ್ಯಾಗಾರದಲ್ಲಿ ಮಾತನಾಡಿದರು. ಜೆಜೆಎಂ ಬಹುಮುಖ ಯೋಜನೆಯಾಗಿದೆ. ಮುಂದಿನ 30ವರ್ಷಗಳವರೆಗೆ ಗ್ರಾಮೀಣ ಭಾಗಗಳಲ್ಲಿ ನೀರಿನ ತೊಂದರೆ ನಿವಾರಣೆಯೊಂದಿಗೆ ಶುದ್ಧನೀರನ್ನು ಮನೆಮನೆಗೆ ಪ್ರತಿ ವ್ಯಕ್ತಿಗೆ 55ಲೀ.ನಷ್ಟು ನೀರನ್ನು ಪೂರೈಸುವುದು ಜೆಜೆಎಂ ಉದ್ದೇಶವಾಗಿದೆ. ನೀರಿನ ಭದ್ರತೆಯೊಂದಿಗೆ, ಬಳಕೆಯಿಂದ ಹೊರಬೀಳುವ ಕಪ್ಪುನೀರು, ಬೂದು ನೀರಿನ ದ್ರವ್ಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಯೋಜನೆ ರೂಪಿಸಲಾಗಿದೆ.ಜೀವನ ಮಟ್ಟ ಸುಧಾರಿಸುವಲ್ಲಿ ನೀರಿನ ಪಾತ್ರ ಮಹತ್ವದ್ದಾಗಿದೆ ಎಂದರು.

ತಾಪಂ ಎಡಿ ಕೆ.ಎಸ್.ಮಲ್ಲನಗೌಡ ಮಾತನಾಡಿ, ಜೆಜೆಎಂ ಯೋಜನೆಯನ್ನು ಗ್ರಾಮಾಡಳಿತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ, ನೀರಿನ ಮಿತಬಳಕೆಯನ್ನು ಜನತೆಯಲ್ಲಿ ಮೂಡಿಸುವಲ್ಲಿ ಗ್ರಾಮಾಡಳಿತ ಬದ್ಧತೆ ತೋರಬೇಕು ಎಂದರು. ಜೆಜೆಎಂ ಅನುಷ್ಠಾನ ಕುರಿತ ವಸ್ತು ಪ್ರದರ್ಶನ, ಮಾಹಿತಿ ಚಿತ್ರಗಳ ಪ್ರದರ್ಶನ ಜರುಗಿತು.

ಕೂಡ್ಲಿಗಿಯ ಸುರಭಿ ಸಂಸ್ಥೆಯ ನಿರ್ದೇಶಕ ಸಿ.ಜಿ.ಶ್ರೀಧರ್, ಐಎಸ್‌ಆರ್‌ಎ ತಂಡದ ಮುಖ್ಯಸ್ಥ ಎ.ಕೊಟ್ರೇಶ್, ಸಮುದಾಯ ಸಂಘಟಕಿ ಎಚ್.ಮಂಜುಳಾ, ತಾಲೂಕಿನ ಎಲ್ಲಾ ಪಿಡಿಒ, ಗ್ರಾಪಂ ಅಧ್ಯಕ್ಷ, ಸದಸ್ಯರು, ಗ್ರಾಪಂ ಸಿಬ್ಬಂದಿ ಇದ್ದರು.