ಉಪ್ಪಾರಹಳ್ಳಿ ಗ್ರಾಮದ ವ್ಯಕ್ತಿ ಮೊಬೈಲ್ ನೆಟ್‌ವರ್ಕ್‌ಗಾಗಿ ಗ್ರಾಮದ ಹೊರವಲಯದಲ್ಲಿ ನಿಂತಿರುವುದು. 
ಜಿಲ್ಲೆ

ಉಪ್ಪಾರಹಳ್ಳಿಗೆ ಎಟಕುತ್ತಿಲ್ಲ ನೆಟ್‌ವರ್ಕ್ - ಮೊಬೈಲ್ ಬಳಕೆದಾರರ ಪರದಾಟ

ಶ್ರೀನಾಥ

ಕಂಪ್ಲಿ: ಮೊಬೈಲ್‌ನಲ್ಲಿ ಕರೆ ಮಾಡಲು, ಸಾಮಾಜಿಕ ಜಾಲತಾಣಗಳ ಬಳಕೆಗಾಗಿ ಉಪ್ಪಾರಹಳ್ಳಿ ಗ್ರಾಮಸ್ಥರು 300 ಮೀ. ದೂರದ ಕಾಲುವೆ ಮೇಲಿನ ದಿನ್ನೆ ಪ್ರದೇಶಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ.

ಮೊಬೈಲ್‌ಯುಗ ನಾಗಲೋಟದಲ್ಲಿದ್ದರೂ ಈ ಗ್ರಾಮಕ್ಕೆ ನೆಟ್‌ವರ್ಕ್ ದೊರೆಯುತ್ತಿಲ್ಲ. ಕಾಲುವೆ ಮೇಲಿನ ದಿನ್ನೆ ಪ್ರದೇಶದಲ್ಲೂ ನೆಟವರ್ಕ್ ಸಿಗದಿದ್ದರೆ ತುರ್ತು ಸಂದರ್ಭಗಳಲ್ಲಿ ಎರಡು ಕಿ.ಮೀ.ದೂರದ ಚಿನ್ನಾಪುರ ಅಥವಾ ಮಟ್ಟಿ ಗ್ರಾಮಕ್ಕೆ ಹೋಗಬೇಕಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಆನ್‌ಲೈನ್ ವ್ಯವಸ್ಥೆ ಬಳಕೆ ಆಗುತ್ತಿರುವುದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಆನ್‌ಲೈನ್ ಪಾಠ, ಶಾಲೆ ಮತ್ತು ತರಗತಿಗಳ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯಲು ತೊಂದರೆ ಎದುರಿಸಬೇಕಾಗಿದೆ.

ದಾಖಲಾತಿ, ಸರ್ಕಾರಿ ಹುದ್ದೆ, ವಿದ್ಯಾರ್ಥಿ ವೇತನ ಸೇರಿದಂತೆ ಇನ್ನಿತರ ಅರ್ಜಿ ಸಲ್ಲಿಕೆಗೆ ನೆಟ್‌ವರ್ಕ್ ಹುಡುಕಿಕೊಂಡು ಹೋಗಬೇಕಿದೆ. ಗ್ರಾಮ ಪಂಚಾಯಿತಿಯಿಂದ ಡಿಶ್ ವೈರ್ ಜತೆಗೆ ಕೇಬಲ್ ಸಾಗಿಸಿ ಗ್ರಾಮದಲ್ಲಿನ ಸಹಿಪ್ರಾ ಶಾಲೆಗೆ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲಾಗಿದೆ.

ಇದರಿಂದ ಶಾಲೆಗೆ ಮಾತ್ರ ವೈಫೈ ಸೌಲಭ್ಯ ಇದ್ದು, ವಿದ್ಯುತ್ ಸಂಪರ್ಕ ಇದ್ದಾಗ ಮಾತ್ರ ಬಳಕೆಯಾಗುತ್ತದೆ. ಹೀಗಾಗಿ ಗ್ರಾಮದಲ್ಲಿ ಶಾಶ್ವತವಾಗಿ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬಿಎಸ್‌ಎನ್‌ಎಲ್‌ಗೆ ಶಾಸಕರಿಂದ ಪತ್ರ

ಉಪ್ಪಾರಹಳ್ಳಿ ಗ್ರಾಮಕ್ಕೆ ನೆಟ್‌ವರ್ಕ್ ಒದಗಿಸಿಕೊಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವೂ ಸೇರಿದಂತೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 2023ರ ನ.16ರಂದು ಬೆಂಗಳೂರಿನ ಬಿಎಸ್‌ಎನ್‌ಎಲ್ ಜನರಲ್ ಮ್ಯಾನೇಜರ್‌ಗೆ ನೆಟ್‌ವರ್ಕ್ ಒದಗಿಸುವಂತೆ ಶಾಸಕ ಜೆ.ಎನ್.ಗಣೇಶ್ ಪತ್ರ ಬರೆದು ಒತ್ತಾಯಿಸಿದ್ದಾರೆ. ಹೀಗಿದ್ದರೂ ಇನ್ನೂ ನೆಟ್‌ವರ್ಕ್ ಭಾಗ್ಯ ದೊರೆತಿಲ್ಲ.

==========

ಉಪ್ಪಾರಹಳ್ಳಿಯಲ್ಲಿ ಬಿಎಸ್‌ಎನ್‌ಎಲ್ ಟವರ್‌ಗಾಗಿ ಗ್ರಾಮಾಡಳಿತ ನಿರಂತರ ಪ್ರಯತ್ನ ನಡೆಸಿದೆ. ಟವರ್ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳು, ಶಾಸಕ, ಸಂಸದರಿಗೂ ಪತ್ರ ಬರೆಯಲಾಗಿದೆ. ಇಷ್ಟರಲ್ಲೇ ಬಿಎಸ್‌ಎನ್‌ಎಲ್ ಟವರ್ ಹಾಕುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ತಿಳಿದು ಬಂದಿದೆ.

> ಎಸ್.ನಾಗಮ್ಮ ನಾಗರಾಜ, ಗ್ರಾಪಂ ಅಧ್ಯಕ್ಷೆ, ಮೆಟ್ರಿ

==========

ಉಪ್ಪಾರಹಳ್ಳಿ ಗ್ರಾಮಕ್ಕೆ ಬಿಎಸ್‌ಎನ್‌ಎಲ್ ಟವರ್ ವ್ಯವಸ್ಥೆ ಕಲ್ಪಿಸುವಂತೆ ಕಳೆದ ಐದು ವರ್ಷಗಳಿಂದ ಒತ್ತಾಯಿಸಿದರೂ ಇನ್ನೂ ಸಾಧ್ಯವಾಗಿಲ್ಲ. ಗ್ರಾಮಕ್ಕೆ ಡಿಜಿಟಲ್ ಇಂಡಿಯಾ ವ್ಯವಸ್ಥೆ ಒದಗಿಸಲು ಕೂಡಲೇ ಮೊಬೈಲ್ ಟವರ್ ವ್ಯವಸ್ಥೆ ಕಲ್ಪಿಸಬೇಕು.

> ಎಚ್.ಕುಮಾರಸ್ವಾಮಿ, ಗ್ರಾಪಂ ಸದಸ್ಯ, ಮೆಟ್ರಿ

==========

ಉಪ್ಪಾರಹಳ್ಳಿ ಗ್ರಾಮಕ್ಕೆ ಬಿಎಸ್‌ಎನ್‌ಎಲ್ ಟವರ್ ಮಂಜೂರಾಗಿದೆ. ಟವರ್ ಅಳವಡಿಕೆಗೆ ಸ್ಥಳ ಸಮೀಕ್ಷೆ ನಡೆಸಲಾಗುವುದು. ಗ್ರಾಮದಲ್ಲಿ ಸರ್ಕಾರಿ ಸ್ಥಳ ಇರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಶೀಘ್ರವೇ ಸ್ಥಳ ಗುರುತಿಸಿ, ಮೊಬೈಲ್ ಟವರ್ ಅಳವಡಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.

> ಡಿ.ಸತೀಶ್, ಬಿಎಸ್‌ಎನ್‌ಎಲ್ ಜೆಟಿಒ, ಕಂಪ್ಲಿ