ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ತಾಲೂಕಿನ ನಂ.1ಇಟಗಿ ಸಮೀಪದ ಶಂಕರಾಚಾರಿ ಮಡುವು ಬಳಿ ಕೆಲ ಪಂಪ್‌ಸೆಟ್‌ಗಳು ಮುಳುಗಿವೆ. ಕೆಲ ರೈತರು ಮುಂಜಾಗ್ರತೆಯಿಂದ ಪಂಪ್‌ಸೆಟ್‌ಗಳನ್ನು ಬಿಚ್ಚಿಟ್ಟಿದ್ದಾರೆ.
ನದಿಗೆ 1.22 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರದ ಇಟಗಿ, ಸಣಾಪುರ, ಬೆಳಗೋಡ್‌ಹಾಳ್ ಭಾಗದಲ್ಲಿ ಪಂಪ್‌ಸೆಟ್‌ಗಳು ಮುಳುಗಿವೆ. ಶಂಕರಾಚಾರಿ ಮಡುವು ಪ್ರದೇಶದಲ್ಲಿ ಸುಮಾರು 350 ಪಂಪ್‌ಸೆಟ್‌ಗಳಿವೆ.
ನದಿಗೆ ಅಪಾರ ನೀರು ಬಂದಾಗ ಒಂದೊಂದು ಪಂಪ್‌ಸೆಟ್ ಬಿಚ್ಚಲು 300 ರೂ. ಅಳವಡಿಸಲು 300 ಸೇರಿ 600 ರೂ. ಪಾವತಿಸಬೇಕಾಗುತ್ತದೆ. ಅಕಸ್ಮಾತ್ ಪಂಪ್‌ಸೆಟ್ ನೀರಲ್ಲಿ ಮುಳುಗಿದರೆ ಅಂತಹ ಪಂಪ್‌ಸೆಟ್ ಬಿಚ್ಚಿ ಒಣಗಿಸಿ ಮತ್ತೆ ಜೋಡಿಸಲು 900 ರೂ. ಶುಲ್ಕ ತಗುಲುತ್ತದೆ.
ಇಟಗಿಯ ಹಳ್ಳ ಸೇತುವೆ ಮುಳುಗಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು ನಡೆದುಕೊಂಡು ಶಾಲೆಗೆ ಹೋಗಿ ಬರುವಂತಾಗಿದೆ. ಸೇತುವೆ ಮೇಲೆ ಮೊಣಕಾಲುದ್ದ ನೀರು ಹರಿಯುತ್ತಿದೆ. ಮೀನುಗಾರಿಕೆ ಸ್ಥಗಿತಗೊಳಿಸಿರುವುದರಿಂದ ಮೀನುಗಾರರು ಬಲೆ ಹೆಣೆಯುವ, ದುರಸ್ತಿಗೊಳಿಸುವ, ಬುಟ್ಟಿ ತಯಾರಿಸುವಲ್ಲಿ ನಿರತರಾಗಿದ್ದಾರೆ.