ಕಂಪ್ಲಿ: ಮಳೆ, ನದಿಯಲ್ಲಿ ಪ್ರವಾಹ, ಸಾಂಕ್ರಾಮಿಕ ಕಾಯಿಲೆ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಮಳೆಯಿಂದಾಗುವ ಹಾನಿ ತಡೆಯಲು ಚರಂಡಿ ಸ್ವಚ್ಛತೆಗೊಳಿಸುವುದು, ಶುದ್ಧ ನೀರು ಪೂರೈಸುವುದು, ಆರ್.ಒ ಘಟಕಗಳನ್ನು ಸುಸ್ಥಿತಿಯಲ್ಲಿ ನಿರ್ವಹಿಸುವುದು, ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸುವುದು, ನೀರಿನ ಮಾದರಿಗಳನ್ನು ಪರೀಕ್ಷಿಸಲು ಸ್ಥಳೀಯ ಆಡಳಿತ ಜಾಗ್ರತೆ ವಹಿಸಬೇಕೆಂದು ಸೂಚಿಸಿದರು.
ಮಳೆ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ನಿಗಾ ವಹಿಸಬೇಕಿದೆ. ಜಾನುವಾರುಗಳಿಗೆ ಸಕಾಲಕ್ಕೆ ಲಸಿಕೆ ಕೊಡುವುದು, ಕುಡಿವ ನೀರು, ಮೇವಿನ ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಪಶು ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು. ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜಿಗೆ ಕೃಷಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.
ಮಳೆಗಾಲದಲ್ಲಿ ಶಿಥಿಲ ಕೋಣೆಗಳಲ್ಲಿ ಮಕ್ಕಳನ್ನು ಕೂಡಿಸದಂತೆ ಸಿಡಿಪಿಒ ಹಾಗೂ ಮುಖ್ಯಶಿಕ್ಷಕರು ಗಮನಹರಿಸಬೇಕು. ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಲ್ಲಿ ಮುಳುಗಡೆ ಪ್ರದೇಶದ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವುದು, ಕಾಳಜಿ ಕೇಂದ್ರ ತೆರೆಯುವುದು ಸೇರಿದಂತೆ ಸಾಂಕ್ರಮಿಕ ರೋಗ ಹರಡದಂತೆ ಕ್ರಮಕೈಗೊಳ್ಳುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ತಾಪಂ ಎಡಿ ಕೆ.ಎಸ್.ಮಲ್ಲನಗೌಡ, ತಾಲೂಕು ಆರೋಗ್ಯ ಅಧಿಕಾರಿ ಡಾ.ಜಿ.ಅರುಣ್, ಆರ್‌ಐ ವೈ.ಎಂ.ಜಗದೀಶ್, ಶಿರಸ್ತೇದಾರರಾದ ಜಿ.ಪಂಪಾಪತಿ, ಎಸ್.ಡಿ.ರಮೇಶ್, ಅಧಿಕಾರಿಗಳಾದ ಟಿ.ಎಂ.ಬಸವರಾಜ, ಲತೀಫಾಬೇಗಂ, ಪಿ.ಬಸವರಾಜ, ಜ್ಯೋತಿ ಇತರರಿದ್ದರು.