ಜಿಲ್ಲೆ

ಷರತ್ತುರಹಿತ ಭತ್ತ ಖರೀದಿ ಕೇಂದ್ರ ಆರಂಭಿಸಿ

ಕಂಪ್ಲಿ: ಷರತ್ತುರಹಿತ ಮತ್ತು ನಿರಂತರ ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ಪಟ್ಟಣದಲ್ಲಿ ತಹಸೀಲ್ದಾರ್ ಎಸ್.ಶಿವರಾಜಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಬೆಳೆಗೆ ಸೂಕ್ತ ದರ ಇಲ್ಲದೆ ರೈತಾಪಿ ವರ್ಗ ಸಂಕಷ್ಟ ಸ್ಥಿತಿಯಲ್ಲಿದೆ. ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ಎದುರಾಗಿದೆ. ಸದ್ಯ ಬೇಸಿಗೆ ಹಂಗಾಮಿನ ಭತ್ತ ಕೊಯ್ಲು ಆರಂಭವಾಗುತ್ತಿದೆ. ಆದರೆ, ಭತ್ತದ ದರ ಕುಸಿತಗೊಂಡಿದೆ. ಈಗೀನ ಮಾರುಕಟ್ಟೆ ದರಕ್ಕೆ ಮಾರಾಟ ಮಾಡಿದರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಕಳೆದ ಮುಂಗಾರಿನಲ್ಲಿಯೂ ಸಕಾಲಕ್ಕೆ ಭತ್ತ ಖರೀದಿ ಕೇಂದ್ರ ತೆರೆಯದಿದ್ದರಿಂದ ಎಕರೆಗೆ 10ರಿಂದ 15 ಸಾವಿರ ರೂ. ನಷ್ಟವಾಗಿತ್ತು. ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಿ ರೈತರಿಂದ ಭತ್ತ ಖರೀದಿಸಬೇಕು. ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದ ಭತ್ತ ಖರೀದಿಸಬೇಕು. ಇಲ್ಲವೇ ರೈತರಿಂದ ಅಕ್ಕಿಯನ್ನಾದರೂ ಖರೀದಿಸಿ ರೈತರಿಗೆ ಅನುಕೂಲ ಒದಗಿಸಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಜೆ.ಭರಮರೆಡ್ಡಿ, ತಾಲೂಕು ಅಧ್ಯಕ್ಷ ವಿ.ವೀರೇಶ, ನಗರ ಅಧ್ಯಕ್ಷ ತಿಮ್ಮಪ್ಪನಾಯಕ, ಪದಾಧಿಕಾರಿಗಳಾದ ನಾರಾಯಣರೆಡ್ಡಿ, ಮುರಾರಿ, ಶ್ರೀನಿವಾಸ್, ನಿಂಗಪ್ಪ, ಪಿ.ಸತ್ಯನಾರಾಯಣ ಇತರರಿದ್ದರು.