ಕಂಪ್ಲಿ: ತಾಲೂಕು ಕೇಂದ್ರವಾಗಿ 5 ವರ್ಷಗಳಾದರೂ ಕ್ರೀಡಾಂಗಣ ನಿರ್ಮಾಣವಾಗದೇ ಇರುವುದು, ಕ್ರೀಡಾಪಟುಗಳ ಬೇಸರಕ್ಕೆ ಕಾರಣವಾಗಿದೆ.
ನಿತ್ಯ ಕ್ರೀಡಾಭ್ಯಾಸಕ್ಕೆ ಬರುವ ತಾಲೂಕು ಮಟ್ಟದ ಕ್ರೀಡಾಕೂಟಗಳು, ಶಾಲೆ, ಕಾಲೇಜು ಮಟ್ಟದ ಕ್ರೀಡಾಕೂಟಗಳಿಗೆ ತಾಲೂಕು ಕ್ರೀಡಾಂಗಣ ಅಗತ್ಯ. ಇದರಿಂದ ಉತ್ತಮ ಕೌಶಲಾಧಾರಿತ, ಸ್ಫೂರ್ತಿಯುಳ್ಳ ಕ್ರೀಡಾಪಟುಗಳು ಹೊರಹೊಮ್ಮಲು ಸಾಧ್ಯ. ಆದ್ದರಿಂದ ತಾಲೂಕಿಗೊಂದು ಕ್ರೀಡಾಂಗಣ ರೂಪುಗೊಳ್ಳಬೇಕಿದೆ.
ಪಟ್ಟಣದಲ್ಲಿ ಸುಮಾರು 350ಕ್ಕೂ ಹೆಚ್ಚು ಕಬಡ್ಡಿ ಆಟಗಾರರು, 30ಕ್ಕೂ ಅಧಿಕ ಕಬಡ್ಡಿ ತಂಡಗಳಿವೆ. 100ಕ್ರಿಕೆಟ್ ತಂಡಳು, 300 ಅಥ್ಲೇಟ್ಸ್‌ಗಳಿದ್ದಾರೆ. ಅಂತರ್ ವಿಶ್ವವಿದ್ಯಾಲಯ ಸೇರಿ ರಾಜ್ಯಮಟ್ಟದ ಕ್ರೀಡಾಪಟುಗಳಿದ್ದಾರೆ. ಇರುವ ಸೌಲಭ್ಯ ಬಳಸಿಕೊಂಡು ಐದಾರು ಜನ ಪೊಲೀಸ್ ಉಪನಿರೀಕ್ಷಕರಾಗಿ, 25 ಜನ ಪೊಲೀಸ್ ಪೇದೆಗಳಾಗಿ, 100ಕ್ಕೂ ಹೆಚ್ಚು ಯುವಕರು ಸೈನ್ಯಕ್ಕೆ ನೇಮಕಗೊಂಡಿದ್ದಾರೆ. ಇವರೆಲ್ಲ ಕ್ರೀಡಾಭ್ಯಾಸ, ದೈಹಿಕ ಕಸರತ್ತುಗಳಿಗಾಗಿ ಎಪಿಎಂಸಿ, ರಸ್ತೆ, ಬಡಾವಣೆ, ಶಾಲೆ, ಕಾಲೇಜುಗಳ ಮೈದಾನಗಳನ್ನು ಬಳಸಿಕೊಂಡಿದ್ದಾರೆ. ಒಂದು ವೇಳೆ ಕ್ರೀಡಾಂಗಣ ಇದ್ದರೆ ಇವರ ಸಂಖ್ಯೆ ದ್ವಿಗುಣಗೊಳ್ಳಲಿದೆ.
ತಾಲೂಕು ಕ್ರೀಡಾಂಗಣಕ್ಕಾಗಿ ಭೂಮಿಯನ್ನು ಗುರುತಿಸಬೇಕಿದೆ. ಲಭ್ಯವಿಲ್ಲದಿದ್ದಲ್ಲಿ ಸಾರ್ವಜನಿಕರ ಹಿತಾಸಕ್ತಿಗಾಗಿ ಖರೀದಿಸಿ ತಾಲೂಕು ಕ್ರೀಡಾಂಗಣ ರೂಪಿಸಬೇಕಿದೆ ಎಂದು ಪ್ರಮುಖರಾದ ರಮೇಶ್ ಎನ್.ಶಿವಪೂರ್, ಮುತ್ತಣ್ಣ ನಂದ್ಯಾಲ್, ಬಿ.ರಾಜು, ಬಸವರಾಜ್, ಕೆ.ಮಾರುತಿ ಇತರ ಕ್ರೀಡಾಂಗಣ ಅಪೇಕ್ಷಿತರು ಒತ್ತಾಯಿಸಿದ್ದಾರೆ.