ಅಲಂಕೃತಗೊಂಡ ಸೀತಾ ಲಕ್ಷ್ಮಣ ಸಮೇತ ಅಮೃತಶಿಲೆಯ ಶ್ರೀರಾಮಚಂದ್ರ ದೇವರ ಪ್ರತಿಮೆ. 
ಜಿಲ್ಲೆ

ಕಂಪ್ಲಿಯಲ್ಲಿ 119 ಶ್ರೀರಾಮ ಮಹೋತ್ಸವ ಇಂದು

ಶಶಿಧರ ಎಲ್

ಕಂಪ್ಲಿ: ಎರಡು ಶತಮಾನದ ಇತಿಹಾಸ ಹೊಂದಿರುವ ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಶ್ರೀರಾಮನವಮಿ ನಿಮಿತ್ತ ಏ.17ರಂದು 119 ಶ್ರೀರಾಮ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಶ್ರೀರಾಮ ಮಹೋತ್ಸವ ನಿಮಿತ್ತ ಏ.11ರಿಂದಲೇ ವಿದ್ವಾನ್ ಶ್ರೀ ಶ್ರೀಪಾದ ಜಾಲಿಹಾಳ್ ಅವರಿಂದ ಶ್ರೀರಾಮಾಯಣ ಪ್ರವಚನ, ಸದ್ಗ್ರಂಥಗಳ ಪಾರಾಯಣ, ರಾಮದೇವರ ಪಲ್ಲಕ್ಕಿ ಉತ್ಸವ, ಭಜನೆ, ಅನ್ನಸಂತರ್ಪಣೆ ನಾನಾ ಕಾರ್ಯಕ್ರಮ ನಡೆದಿವೆ.

ಎರಡು ಶತಮಾನಗಳ ಹೆಗ್ಗಳಿಕೆ: ಬಾವಾಜಿಯೊಬ್ಬರು ಕ್ರಿ.ಶ.1790ರ ಸುಮಾರಿಗೆ ಕಂಪ್ಲಿ ಮಾರ್ಗವಾಗಿ ಸೀತಾ ಲಕ್ಷ್ಮಣ ಸಮೇತ ಅಮೃತಶಿಲೆಯ ಶ್ರೀರಾಮಚಂದ್ರ ದೇವರ ವಿಗ್ರಹಗಳೊಂದಿಗೆ ಕಾಶಿಗೆ ತೆರಳುತ್ತಿದ್ದರು.

ಮಾರ್ಗಾಯಾಸದಿಂದ ಇಲ್ಲಿ ತಂಗಿದ್ದಾಗ, ಬಾವಾಜಿಗೆ ಸ್ವಪ್ನದಲ್ಲಿ ಕಂಪ್ಲಿ ಗ್ರಾಮದಲ್ಲಿ ನೆಲೆಗೊಳ್ಳುವ ಇಚ್ಛೆಯಾಗಿದೆ ಎಂದು ಶ್ರೀರಾಮಚಂದ್ರನು ಪ್ರೇರಣೆ ನೀಡಿದ್ದರಿಂದ ಬಾವಾಜಿಯವರು ಸೀತಾ ಲಕ್ಷ್ಮಣ ಸಮೇತನಾದ ಶ್ರೀಅಮೃತಶಿಲಾ ರಾಮಚಂದ್ರ ದೇವರನ್ನು ಕಂಪ್ಲಿಯ ಬ್ರಾಹ್ಮಣ ಪರಿವಾರಕ್ಕೆ ಸಮರ್ಪಿಸಿದರು.
ಬ್ರಾಹ್ಮಣ ಸಮುದಾಯದವರು ದೇವಸ್ಥಾನಕ್ಕೆ ಯೋಗ್ಯ ಸ್ಥಳವನ್ನು ಆಯ್ಕೆಮಾಡಿ ಕ್ರಿ.ಶ.1790ರ ಸುಮಾರಿಗೆ ಗರ್ಭಗುಡಿಯನ್ನು ನಿರ್ಮಿಸಿದರು.

ಶ್ರೀ ವಿಜಯದಾಸಾರ್ಯರ ಸಾಕು ಮಕ್ಕಳಾದ ಅಪರೋಕ್ಷ ಜ್ಞಾನಿಗಳಾದ ಶ್ರೀ ಮೋಹನದಾಸರ ಅಮೃತಹಸ್ತದಿಂದ ಸೀತಾ ಲಕ್ಷ್ಮಣ ಸಮೇತ ಅಮೃತಶಿಲಾ ರಾಮಚಂದ್ರ ದೇವರ ಪ್ರತಿಮೆಗಳಿಗೆ ಪ್ರಾಣಪ್ರತಿಷ್ಠಾಪನೆ ಮಾಡಿಸಿದರು. ಮುಂದಿನ ವರ್ಷಗಳಲ್ಲಿ ಶ್ರೀ ರಾಮಚಂದ್ರ ದೇವರ ಗರ್ಭಗುಡಿಯ ಎಡಬಲಗಳಲ್ಲಿ ಪ್ರಾಣದೇವರ ಹಾಗೂ ರುದ್ರದೇವರ ಪ್ರತಿಮೆಗಳು ಪ್ರತಿಷ್ಠಾಪನೆಗೊಂಡವು.

ನಿರಂತರ ರಾಮೋತ್ಸವ

ಕ್ರಿ.ಶ.1906ರಲ್ಲಿ ಬ್ರಾಹ್ಮಣ ಸಮುದಾಯದ ದಿಗ್ಗಾವಿ ಕಮಲಾನಾಬಾಚಾರ್ಯರು ಶ್ರೀ ರಾಮೋತ್ಸವ ಆರಂಭಿಸಿದರು. ನಿರಂತರ 35 ವರ್ಷ ರಾಮೋತ್ಸವ ಆಚರಿಸಿದ ನಂತರ ಮಕ್ಕಳಾದ ಪಂ.ದಿಗ್ಗಾವಿ ವೆಂಕೋಬಾಚಾರ್ಯರು, ಸದ್ಯ ಇವರ ಪುತ್ರರಾದ ಡಾ.ದಿಗ್ಗಾವಿ ಗುರುರಾಜಾಚಾರ್ಯರು ರಾಮೋತ್ಸವವನ್ನು ಆಚರಿಸುತ್ತ ಬಂದಿದ್ದಾರೆ. 2006ರ ಏ.7ರಂದು ರಾಮೋತ್ಸವದ ಶತಮಾನೋತ್ಸವ ಆಚರಿಸಲಾಯಿತು.

ಅರ್ಚಕ ಪರಂಪರೆ

ಅಮೃತಶಿಲಾ ರಾಮಚಂದ್ರ ದೇವರ ಅರ್ಚಕರಾಗಿ ಬಳ್ಳಾರಿ ರಾಮಾಚಾರ್, ಬಿ.ವಿಠೋಬಾಚಾರ್, ಮಠದ ರಾಘವೇಂದ್ರಾಚಾರ್, ಯದುಪತಿ ಆಚಾರ್, ಬೋಸಿ ನಾರಾಯಣಾಚಾರ್, ಜೋಯಿಸ್ ಅನಂತಾಚಾರ್ ಹಾಗೂ ಪ್ರಸ್ತುತ ಜೋಯಿಸ್ ರಾಮಾಚಾರ್ ಅರ್ಚಕ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀರಾಮೋತ್ಸವ ಸಂದರ್ಭದಲ್ಲಿ ಉತ್ತರಾದಿ ಮಠದ ಸತ್ಯಧ್ಯಾನತೀರ್ಥ ಶ್ರೀಪಾದಂಗಳವರು ಒಂಬತ್ತು ದಿನಗಳ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟಿದ್ದು ವಿಶೇಷವಾಗಿದೆ.

ಶ್ರಾವಣದಲ್ಲಿ ಪಲ್ಲಕ್ಕಿ ಉತ್ಸವ

ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಪ್ರತಿ ವರ್ಷವೂ ಚೈತ್ರ ಶುದ್ಧ ಪಾಡ್ಯದಿಂದ ಒಂಬತ್ತು ದಿನ ರಾಮೋತ್ಸವ, ಆಷಾಢ ಬಹುಳ ಪಂಚಮಿಯಂದು ಟೀಕಾರಾಯರ ಆರಾಧನೆ, ಶ್ರಾವಣ ಬಹುಳ ಪಾಡ್ಯದಿಂದ ತದಿಗೆತನಕ ಮೂರು ದಿನ ಗುರುಸಾರ್ವಭೌಮ ಶ್ರೀರಾಘವೇಂದ್ರರಾಯರ ಆರಾಧನೆ, ಶ್ರಾವಣ ಮಾಸದ ಪ್ರತಿ ಶನಿವಾರ ರಾಮದೇವರ ಪಲ್ಲಕ್ಕಿ ಉತ್ಸವ, ಕಾರ್ತಿಕ ಮಾಸದಲ್ಲಿ ಧಾತ್ರಿ ಹವನ, ಪ್ರವಚನ ಪೂಜಾದಿ ಕಾರ್ಯಕ್ರಮಗಳು ಜರುಗುತ್ತವೆ.

ಮೂರು ತಲೆಮಾರುಗಳಿಂದ ಶ್ರೀರಾಮೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತ ಬರಲಾಗಿದೆ. ಬ್ರಾಹ್ಮಣ ಸಮಾಜ ಮತ್ತು ಶ್ರೀ ಗುರುರಾಜ ಸೇವಾ ಮಂಡಳಿಯ ಸಹಕಾರ ಸ್ಮರಣೀಯ. ಈ ಭಾಗದಲ್ಲಿ ರಾಮೋತ್ಸವ ಕಣ್ಮನ ಸೆಳೆಯುವ ಆಚರಣೆಯಾಗಿದೆ.| ಡಾ.ದಿಗ್ಗಾವಿ ಗುರುರಾಜಾಚಾರ್, ಶ್ರೀರಾಮೋತ್ಸವ ಆರಾಧಕರು, ಕಂಪ್ಲಿ