ಕಂಪ್ಲಿ: ಶಿವಶರಣ ಹಡಪದ ಅಪ್ಪಣ್ಣ ಅವರು ಸಮ ಸಮಾಜ ನಿರ್ಮಾಣಕ್ಕಾಗಿ ಅಹರ್ನಿಶಿ ಶ್ರಮಿಸಿದರು ಎಂದು ಕಂಪ್ಲಿ ತಾಲೂಕು ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಹೇಳಿದರು.
ತಹಸಿಲ್ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಡಪದ ಅಪ್ಪಣ್ಣ ಅವರ ವಿಚಾರಧಾರೆಗಳು ಸಮಾಜ ಸುಧಾರಣೆಗೆ ನಾಂದಿಯಾಗಿದ್ದವು. ಆದರೆ, ಪಟ್ಟಭದ್ರ ಹಿತಾಸಕ್ತಿಗಳಿಂದ ಶರಣ ಕ್ರಾಂತಿಗೆ ಹಿನ್ನಡೆಯಾಯಿತು ಎಂದರು.
ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಅಶೋಕ ಕುಕನೂರು ಮಾತನಾಡಿ, ಹಡಪದ ಅಪ್ಪಣ್ಣ ಜಯಂತ್ಯುತ್ಸವಕ್ಕೆ ಸರ್ಕಾರ ಅನುದಾನ ಕೊಟ್ಟರೂ ತಾಲೂಕು ಆಡಳಿತ ಮೂರು ವರ್ಷಗಳಿಂದಲೂ ಕೊಡುತ್ತಿಲ್ಲ. ಇದರಿಂದ ಜಯಂತ್ಯುತ್ಸವ ಆಚರಿಸಲು ತೊಡಕಾಗಿದೆ ಎಂದು ದೂರಿದರು.
ಶ್ರೀಗುರು ಭಕ್ತಿಭಂಡಾರಿ ಶ್ರೀಬಸವೇಶ್ವರ ದಾಸೋಹ ಆಶ್ರಮದ ಪೀಠಾಧ್ಯಕ್ಷ ಪಾಮಯ್ಯ ಶರಣರು ವಚನಗಳನ್ನು ಹೇಳಿದರು. ತಹಸೀಲ್ದಾರ್ ಜೂಗಲ ಮಂಜುನಾಯಕ, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಪದಾಧಿಕಾರಿಗಳಾದ ಎಚ್.ಚಂದ್ರಶೇಖರ, ಸಂಗಮೇಶ ಕಂದಕೂರು, ಎಚ್.ರಾಜಶೇಖರ ದೇವಸಮುದ್ರ, ಕಾಳೇಶ್, ಪ್ರತಾಪ್, ರಮೇಶ್, ಶಶಿಕುಮಾರ್, ಕುಮಾರಸ್ವಾಮಿ, ಪ್ರಮುಖರಾದ ಉಗಾದಿ ಶಿವರಾಜ, ಡಿಟಿ ರವೀಂದ್ರಕುಮಾರ್, ಶಿರಸ್ತೇದಾರ್ ಎಸ್.ಡಿ.ರಮೇಶ್, ವಿಎಒ ಲಕ್ಷ್ಮಣನಾಯ್ಕ, ಮಾಲತೇಶ ದೇಶಪಾಂಡೆ, ಸಿಬ್ಬಂದಿ ರಾಧಾ, ವನಿತಾಕುಮಾರಿ, ವೈಷ್ಣವಿ, ಶಿಲ್ಪಾ ಇದ್ದರು.