ಕಂಪ್ಲಿ: ಟಿವಿ, ಮೊಬೈಲ್ ನಡುವೆ ಕಳೆದುಹೋದವರನ್ನು ಸಾಂಸ್ಕೃತಿಕ ಮುಖ್ಯವಾಹಿನಿಗೆ ಕರೆತರುವುದು ಬಹು ಪ್ರಯಾಸದ ಕಾರ್ಯವಾಗಿದೆ ಎಂದು ನಂ.88 ಮುದ್ಲಾಪುರದ ಸಕಿಪ್ರಾ ಶಾಲೆ ಶಿಕ್ಷಕ ಕೆ.ಬಸವರಾಜ ಹೇಳಿದರು.
ಪಟ್ಟಣದ ಗುರುಮಠದಲ್ಲಿ ಗೊಗ್ಗ ವಿಶಾಲಾಕ್ಷಮ್ಮ ಸ್ಮರಣಾರ್ಥ ಗುರುವಾರ ಆಯೋಜಿಸಿದ್ದ 251ನೇ ಶಿವಾನುಭವ ಪ್ರವಚನದಲ್ಲಿ ವಚನಗಳ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದರು. ಶರಣರ ವಚನ ಸಾಹಿತ್ಯ ಸರ್ವಕಾಲಿಕ ಸತ್ಯ. ಬದುಕಿನ ಪೂರ್ಣ ಸಾಧನೆಗೆ ಅನುಭವ ಮತ್ತು ಅನುಭಾವ ಹೊಂದಿದ ವಚನ ಸಾಹಿತ್ಯದ ತಿರುಳುಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದರು.
ವೀರಶೈವ ಸಮಾಜದ ಪ್ರಮುಖ ಸಜ್ಜೇದ ವೀರಭದ್ರಪ್ಪ ಮಾತನಾಡಿ, ಪಟ್ಟಣದಲ್ಲಿ ಕಳೆದ ಆರು ದಶಕಗಳಿಂದ ಓದ್ಸೋ ಕರಿಬಸಯ್ಯ ಅವರ ಶಿವಾನಂದಾಶ್ರಮ ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು.
ಹೊಸಪೇಟೆ ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ, ಪ್ರಮುಖರಾದ ಗೊಗ್ಗ ಚನ್ನಬಸವರಾಜ, ಘನಮಠಯ್ಯ ಹಿರೇಮಠ, ಗೊಗ್ಗ ಶಾಂತಮ್ಮ, ಶೋಭಾ, ಶಾರದಾ, ಚನ್ನಮ್ಮ, ಎಚ್.ಎಂ.ಜಗದೀಶ, ಯೋಗೇಶ್, ಬಿ.ಎಂ.ವಿಶ್ವನಾಥ, ಕಲ್ಗುಡಿ ಬಸಂತಮ್ಮ ಇತರರಿದ್ದರು.