ಜಿಲ್ಲೆ

ಮಾನವ ಕಲ್ಯಾಣಕ್ಕಾಗಿ ಕಲ್ಯಾಣ ಬ್ರಹ್ಮೋತ್ಸವ

ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಶ್ರೀ ಲಕ್ಷ್ಮೀ ವೆಂಕಟರಮಣ ಕಲ್ಯಾಣ ಬ್ರಹ್ಮೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಸಾನ್ನಿಧ್ಯವಹಿಸಿ ಮಾತನಾಡಿ, ವಿಶ್ವಶಾಂತಿ, ಮಾನವ ಕಲ್ಯಾಣಕ್ಕಾಗಿ 41ನೇ ಶ್ರೀ ಲಕ್ಷ್ಮೀ ವೆಂಕಟರಮಣ ಕಲ್ಯಾಣ ಬ್ರಹ್ಮೋತ್ಸವ ಹಮ್ಮಿಕೊಂಡಿದೆ. ಸನಾತನ ಧರ್ಮ ಸಂಸ್ಕೃತಿ, ಆಚಾರ ವಿಚಾರ, ಗುರುಗಳ ಹಿತವಚನಗಳನ್ನು ಪಾಲಿಸುವುದು ಅಗತ್ಯ. ಜೀವನದಲ್ಲಿ ಸತ್ಯ, ಅಹಿಂಸೆ, ಪ್ರಾಮಾಣಿಕತೆ, ನೈತಿಕತೆ ಮತ್ತು ಮಾನವೀಯತೆಗಳನ್ನು ಅಳವಡಿಸಿಕೊಳ್ಳಬೇಕು. ಸೋಮವಾರ ಸತ್ಯನಾರಾಯಣಪೂಜೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬ್ರಹ್ಮೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಮಹಾಭಿಷೇಕ, ಲಕ್ಷ್ಮೀನಾರಾಯಣ ಹೋಮ, ಅನ್ನಸಂತರ್ಪಣೆ, ರಥೋತ್ಸವ ಶ್ರದ್ಧಾಭಕ್ತಿಗಳಿಂದ ಜರುಗಿದವು. ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಭವ್ಯ ವಿಷ್ಣುರಾಜ್, ಹರಿಪ್ರಿಯ, ಅಶ್ವತ್ಥನಾರಾಯಣ ಹಾಗೂ ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.