ಕಂಪ್ಲಿ: ಅಧಿಕ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದ ಬಿಲ್‌ಗಳನ್ನು ಭಾನುವಾರ ಪ್ರದರ್ಶಿಸಿ ಎಮ್ಮಿಗನೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಎಮ್ಮಿಗನೂರು ಗ್ರಾಮದಲ್ಲಿ ಎರಡು ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಎಂಆರ್‌ಪಿಗಿಂತ ಅಧಿಕ ದರದಲ್ಲಿ ರಸಗೊಬ್ಬರ ಮಾರಾಟ ಮಾಡಿದ್ದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಅಂಗಡಿಯವರ ಪರ ಮಾತಾಡಿ ತಾತ್ಸಾರ ತೋರುತ್ತಿದ್ದಾರೆ. ರೈತರಿಗೆ ಕೊಡುವ ಬಿಲ್ ಬೇರೆಯೇ ಇರುತ್ತದೆ. ಈ ಮೊದಲು ರೈತರಿಗೆ ವಿಶ್ವಾಸದಿಂದ ಮಾತನಾಡಿ ರಸಗೊಬ್ಬರ ಸೇರಿದಂತೆ ಇತರ ಕೃಷಿ ಪರಿಕರ ನೀಡುತ್ತಿದ್ದರು. ಇದೀಗ ಹೊಲ, ಗದ್ದೆ, ಮನೆ ಅಡಮಾನ ಇಡುವಂತೆ ಕೃಷಿ ಪರಿಕರ ಮಾರಾಟಗಾರರು ಒತ್ತಾಯಿಸುತ್ತಿದ್ದಾರೆ ಎಂದು ದೂರಿದರು.
ನಿಯಮದಂತೆ ದರ ಪಟ್ಟಿ ಪ್ರದರ್ಶಿಸಬೇಕು. ದಾಸ್ತಾನು ಇರುವ ಕೃಷಿ ಪರಿಕರಗಳ ಪಟ್ಟಿ ಪ್ರದರ್ಶಿಸಬೇಕು. ಕೃಷಿ ಪರಿಕರ ಮಾರಾಟಗಾರರಿಗೆ ಸಹಕರಿಸುವ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ತಾಲೂಕು ಅಧ್ಯಕ್ಷ ವಿ.ವೀರೇಶ್ ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಖಾಸಿಂಸಾಬ್, ಎಮ್ಮಿಗನೂರು ಘಟಕದ ಅಧ್ಯಕ್ಷ ಸಣ್ಣ ಜಡೆಪ್ಪ, ಪದಾಧಿಕಾರಿಗಳಾದ ಕಾಗೆ ಈರಣ್ಣ, ಅಡಿವೆಯ್ಯಸ್ವಾಮಿ, ಒ.ಎಂ.ಮಹಾಂತಸ್ವಾಮಿ, ಟಿ.ಜಡೆಪ್ಪ, ಶಿವರುದ್ರಗೌಡ, ಹರಿಜನ ಲಿಂಗಪ್ಪ, ಗುಡಿಸಲು ರಾಜಾಸಾಬ್, ಅಲ್ಲಾಸಾಬ್, ವೀರೇಶಗೌಡ್ರು, ಎಚ್.ಮಲ್ಲಯ್ಯ ಇತರರಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಉಪ ಕೃಷಿ ನಿರ್ದೇಶಕ ಎಸ್.ಎನ್.ಮಂಜುನಾಥ, ರೈತರ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಯಮ ಉಲ್ಲಂಘಿಸಿದ ಕೃಷಿ ಪರಿಕರ ಮಾರಾಟಗಾರರ ವಿರುದ್ಧ ಕ್ರಮವಹಿಸಲಾಗುವುದು ಎಂದು ತಿಳಿಸಿದರು.