ಕಂಪ್ಲಿ: ಸರ್ಕಾರಿ ನೌಕರರಿಗೆ ನೀಡುವ ವೈದ್ಯಕೀಯ ಸೌಲಭ್ಯವನ್ನು ನಿವೃತ್ತ ಸರ್ಕಾರಿ ನೌಕರರಿಗೂ ನೀಡಲು ಸರ್ಕಾರ ಮುಂದಾಗಬೇಕು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ ಒತ್ತಾಯಿಸಿದರು.
ಇಲ್ಲಿನ ಮಲ್ಲಿಕಾರ್ಜುನ ಕಲ್ಯಾಣಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಸರ್ಕಾರಿ ನಿವೃತ್ತ ನೌಕರರ ಸಂಘದ 4ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದರು. ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ ನಿವೇಶನದೊಂದಿಗೆ ಅನುದಾನ ಒದಗಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆನೆಗೊಂದಿ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದ ಪ್ರಮುಖ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ನಿವೃತ್ತಿ ನಂತರದ ಜೀವನ ಸುಖಮಯವಾಗಿರಲು ಕುಟುಂಬಸ್ಥರೊಂದಿಗೆ ಶಾಂತಿ, ನೆಮ್ಮದಿ ಮತ್ತು ಪ್ರೀತಿಯಿಂದ ಜೀವಿಸಬೇಕು. ನಿತ್ಯ ವ್ಯಾಯಾಮ, ವಾಯುವಿಹಾರ, ಲಘು ಆಹಾರ ಸೇವನೆ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ 70ವರ್ಷ ಮೇಲ್ಪಟ್ಟ ಹಿರಿಯ ನಿವೃತ್ತ ನೌಕರರು, ನಾನಾ ಕ್ಷೇತ್ರಗಳ ವಿಶೇಷ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಕೃಷ್ಣ ಎಸ್.ಪೋಳ್, ಜವಳಿ ವೀರಮ್ಮ, ಸಂಘದ ಪದಾಧಿಕಾರಿಗಳಾದ ವಿ.ನಾರಾಯಣರೆಡ್ಡಿ, ನಾಗರಾಜ ದಬಾಡಿ, ಬಿ.ವೀರಣ್ಣ, ಟಿ.ಶಶಿಧರ, ಎ.ಬಸವರಾಜ್, ಅಮರೇಶಪ್ಪ, ಜಿ.ಕೆ.ನೀಲಕಂಠರಾವ್ ಇತರರು ಇದ್ದರು. ಕೆ.ಎಂ.ದೀಕ್ಷಾ ಪ್ರಾರ್ಥಿಸಿದರು.