ಕಂಪ್ಲಿ: ತಾಲೂಕಿನಲ್ಲಿ ಮಳೆ ನಿಂತ ಮೇಲೆ ಕೆಂಪುಮೆಣಸಿನಕಾಯಿ ಬೆಳೆಗೆ ಬ್ಲಾೃಕ್ ಥ್ರಿಪ್ಸ್(ಕಪ್ಪು ನುಸಿ ಕೀಟ)ರೋಗ ಬಾಧೆ ಕಾಣಿಸಿಕೊಂಡಿದ್ದು, ರೈತರಿಗೆ ಚಿಂತೆಯಾಗಿದೆ.
ತಾಲೂಕಿನಲ್ಲಿ 3800 ಹೆಕ್ಟೇರ್‌ನಲ್ಲಿ ಕೆಂಪು ಮೆಣಿಸಿನಕಾಯಿ ಬೆಳೆದಿದ್ದು, ಇದೀಗ ಎಮ್ಮಿಗನೂರು ಕ್ರಾಸ್, ಮೆಟ್ರಿ, ದೇವಸಮುದ್ರ, ಕೆಟಿಪುರ, ದೇವಲಾಪುರ, ಸುಗ್ಗೇನಹಳ್ಳಿ ಭಾಗಗಳಲ್ಲಿನ ಕೆಂಪು ಮೆಣಿಸಿನಕಾಯಿಗೆ ಎಕರೆಗೆ ಶೇ.30 ಬೆಳೆಗೆ ಕಪ್ಪು ನುಸಿ ಕೀಟ ರೋಗ ಕಾಣಿಸಿಕೊಂಡಿದೆ. ಮೆಣಸಿನಕಾಯಿ ಎಲೆಗಳಲ್ಲಿ ಕಪ್ಪು ನುಸಿ ಕೀಟಗಳು ಎಲೆಗಳ ಕೆಳಭಾಗ, ಹೂಗಳಲ್ಲಿದ್ದು ರಸ ಹೀರುವುದರಿಂದ ಎಲೆ ಅಂಚು ಮುರುಟಿಗೊಂಡು ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಹೂಗಳು ಒಣಗಿ ಉದುರುತ್ತವೆ. ಇದರಿಂದ ಗಿಡದಲ್ಲಿ ಮೆಣಸಿನಕಾಯಿಯ ಸಂಖ್ಯೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತದೆ. ಕಳೆದ ವರ್ಷವೂ ಈ ರೋಗ ಕಾಡಿತ್ತು. ಹೂ ಕಾಯಿ ಬಿಡುವ ಹಂತದಲ್ಲಿ ಕಪ್ಪು ನುಸಿ ಕೀಟ ಬಾಧೆ ಆರಂಭಗೊಂಡಿದ್ದು ರೈತರು ಮುಂಜಾಗ್ರತಾ ಕ್ರಮವಾಗಿ ತೋಟದ ಸುತ್ತಲೂ ಅಂತರ, ಮಿಶ್ರ ಬೆಳೆಗಳನ್ನಾಗಿ ಬೆಂಡೆ, ಮೆಕ್ಕೆಜೋಳ, ಜೋಳ, ಸಜ್ಜೆ, ಚೆಂಡು ಹೂ ಬೆಳೆದಲ್ಲಿ ಕೀಟ ಬಾಧೆ ನಿಯಂತ್ರಿಸಬಹುದಾಗಿದೆ.
ನಿರಂತರ ಏಕ ಬೆಳೆ ಬೆಳೆಯುವುದರಿಂದ, ಬೆಳೆ ಪರಿವರ್ತನೆ ಮಾಡದಿದ್ದರಿಂದ ಮಣ್ಣಿನಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು, ಹಿಂದಿನ ಬೆಳೆ ಕೀಟ ಬಾಧೆ ಮಣ್ಣಲ್ಲಿ ಉಳಿದು ಪುನಃ ಅದೇ ಬೆಳೆ ಬೆಳೆದಿದ್ದರಿಂದ ಕೀಟ ಬಾಧೆ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಹಸಿರೆಲೆಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಎರೆಹುಳು, ಸೆಗಣಿ ಗೊಬ್ಬರ, ಕೋಳಿ ಗೊಬ್ಬರ ನೀಡುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಿದೆ.
ಕಳೆದ ವರ್ಷ ಮೆಣಸಿನಕಾಯಿ ದರ ಕುಸಿತ, ರೋಗಬಾಧೆಯಿಂದ ನಷ್ಟ ಅನುಭವಿಸಿದ್ದೆವು. ಇದೀಗ ಎಲೆ ಉದುರುವ ರೋಗ, ಕಪ್ಪು ನುಸಿ ಕೀಟ ಬಾಧೆ ಕಾಣಿಸಿಕೊಂಡಿದ್ದು ಆತಂಕ ಮೂಡಿದೆ. ಎಕರೆಗೆ 1 ಲಕ್ಷ ರೂ.ಗೂ ಅಧಿಕ ವೆಚ್ಚ ಮಾಡಿದ್ದೇವೆ ಎಂದು ಮೆಣಸಿನಕಾಯಿ ಬೆಳೆಗಾರರಾದ ಸಿಂಗ್ಲಿ ಈರಮ್ಮ, ಪೋಲಪ್ಪ, ಕಿಶೋರ್ ಸೇರಿ ಮೆಣಸಿನಕಾಯಿ ಬೆಳೆಗಾರರು ಅಳಲು ತೋಡಿಕೊಂಡರು.
ಎಕರೆಗೆ 25ರಿಂದ 30 ನೀಲಿ ಅಂಟಿನ ಮೋಹಕ ಬಲೆಗಳನ್ನು ಬಳಸಿ ಕೀಟ ನಿಯಂತ್ರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ.80732 19573 ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಆರ್.ಜೆ.ಕರಿಗೌಡರ್ ತಿಳಿಸಿದ್ದಾರೆ.
ಕಪ್ಪು ನುಸಿ ಕೀಟ ರೋಗ ಬಾಧೆ ನಿಯಂತ್ರಣಕ್ಕೆ ಎಕರೆಗೆ ಪ್ರತಿ ಲೀಟರ್‌ಗೆ ಒಟ್ಟಿಸೀಲಿಯಂ, ಸುಡೋ ಮೋನಾಸ್ ಬಯೋಫೆಸ್ಟಿಸೈಡ್ಸ್ ಮಿಶ್ರಣವನ್ನು ಸಿಂಪಡಿಸಬೇಕು. ರೈತರು ಬೆಳೆ ಪರಿವರ್ತನೆ ಪದ್ಧತಿ ಅನುಸರಿಸಬೇಕು. ಮುಖ್ಯ ಬೆಳೆಯೊಂದಿಗೆ ಮಿಶ್ರ, ಅಂತರ ಬೆಳೆ ಬೆಳೆಯುವ ಮೂಲಕ ರೋಗ ಬಾಧೆ ನಿಯಂತ್ರಿಸಬಹುದು. | ಡಾ.ಸಿ.ಎಂ.ಕಾಲಿಬಾವಿ ಮುಖ್ಯ ಬೇಸಾಯ ತಜ್ಞ, ಸಿರಗುಪ್ಪ