ಕಂಪ್ಲಿ: ಪಟ್ಟಣದಲ್ಲಿ ಪಿಒಪಿ ಗಣಪತಿ ತಯಾರಿ, ಸಂಗ್ರಹ ಮತ್ತು ಮಾರಾಟ ಮಾಡಬಾರದು ಎಂದು ಸ್ಥಳೀಯ ಗಣಪತಿ ತಯಾರಕರಿಗೆ ಪುರಸಭೆ ಆಡಳಿತ ಸೂಚಿಸಿದೆ.
ಆದರೂ ಭಕ್ತರು ಬೇರೆಡೆಗಳಿಂದ ಪಿಒಪಿ ಮೂರ್ತಿಗಳನ್ನು ತರಿಸಿ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ. ಇದು ಸ್ಥಳೀಯ ಗಣಪತಿ ಮೂರ್ತಿ ತಯಾರಕರಿಗೆ ಆರ್ಥಿಕ ನಷ್ಟದ ಬಿಸಿ ಮುಟ್ಟಿದೆ. ಅಲ್ಲದೇ, ಪರಿಸರಕ್ಕೂ ಆಪತ್ತಿಗೆ ಕಾರಣವಾಗಿದೆ.
ಪ್ರತಿ ವರ್ಷ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳನ್ನು ಯತೇಚ್ಛವಾಗಿ ಪ್ರತಿಷ್ಠಾಪಿಸಲಾಗಿದ್ದು, ಈ ಬಾರಿಯಾದರೂ ಪಿಒಪಿ ಮುಕ್ತ ಗಣಪತಿ ಹಬ್ಬ ಆಚರಣೆಯಾಗುವುದೇ ಎಂಬ ಪ್ರಶ್ನೆ ಪಟ್ಟಣದ ಗಣಪತಿ ಮೂರ್ತಿ ತಯಾರಕರು, ಪರಿಸರ ಪ್ರಿಯರನ್ನು ಕಾಡುತ್ತಿದೆ.
ಏಕೆಂದರೆ, ಕಳೆದ ಏಳು ವರ್ಷಗಳಿಂದ ಪಿಒಪಿ ಗಣಪತಿ ಮೂರ್ತಿ ತಯಾರು, ಸಂಗ್ರಹ, ಮಾರಾಟ ನಿಷೇಧಿಸಿದ್ದರೂ ಬೇರೆಡೆಯಿಂದ ಬೃಹತ್ ಗಾತ್ರದ ಪಿಒಪಿ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸಲಾಗುತ್ತಿದೆ.
ಆದರೆ, ಪರಿಸರ ಅಧಿಕಾರಿಗಳಾಗಲಿ, ಪುರಸಭೆ ಅಧಿಕಾರಿಗಳಾಗಲಿ ಈ ಕುರಿತು ಕ್ರಮ ವಹಿಸಿಲ್ಲ ಎನ್ನುವುದು ಮಣ್ಣಿನ ಮೂರ್ತಿಗಳ ತಯಾರಕರ ಆರೋಪವಾಗಿದೆ.
ನಿಷೇಧದ ಬಗ್ಗೆ ಸಲಹೆ
ಪಿಒಪಿ, ಬಾರಲೋಹ ಬಳಕೆ ಗಣಪತಿಗಳ ವಿಸರ್ಜನೆಯಿಂದಾಗಿ ನದಿ, ಹಳ್ಳ, ಕೆರೆ, ಬಾವಿ, ನೀರು ಮಾಲಿನ್ಯಗೊಳ್ಳುತ್ತಿವೆ. ಇದನ್ನು ತಪ್ಪಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸುತ್ತೋಲೆ ಹೊರಡಿಸಿ, ಪ್ಲಾಸ್ಟರ್ ಆಫ್ ಪ್ಯಾರೀಸ್, ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹ, ಮಾರಾಟ, ವಿಜರ್ಸನೆಯನ್ನು ನಿಷೇಧಿಸಿದೆ.
ಈ ಹಿನ್ನೆಲೆಯಲ್ಲಿ 2025ರ ಜೂ.23ರಂದು ಮತ್ತು 2025ರ ಜು.8ರಂದು ಎರಡು ಬಾರಿ ಪಟ್ಟಣದ ಗಣಪತಿ ತಯಾರಕರ ಸಭೆ ನಡೆಸಿ, ಪಿಒಪಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ನಿಷೇಧ ಕುರಿತು ಮಾಹಿತಿ ನೀಡಿದ್ದೇವೆ. ಈ ಬಾರಿ ಪಿಒಪಿ ಮುಕ್ತ ಹಾಗೂ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ಸಲಹೆ ನೀಡಲಾಗುವುದು ಎಂದು ಪರಿಸರ ಇಂಜಿನಿಯರ್ ಶರಣಪ್ಪ ತಿಳಿಸಿದ್ದಾರೆ.
======
ಪಿಒಪಿ ಗಣಪತಿ ಮೂರ್ತಿ ತಯಾರಿಕೆ, ಮಾರಾಟ ಕೈಬಿಟ್ಟಿದ್ದರಿಂದ ಆರ್ಥಿಕ ನಷ್ಟವಾಗುತ್ತಿದ್ದು, ಪುರಸಭೆ ಆಡಳಿತ ಪ್ರೋತ್ಸಾಹ ಅಥವಾ ಪರಿಹಾರ ಧನ ವಿತರಿಸಬೇಕು. ಈ ಬಾರಿ ಪಟ್ಟಣದಲ್ಲಿ ಪಿಒಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರೆ, ಮಾರಾಟ ಮಾಡಿದರೆ ಮೂರ್ತಿ ತಯಾರಕರೆಲ್ಲ ಒಟ್ಟಾಗಿ ಪುರಸಭೆ ಮುಂದೆ ಪ್ರತಿಭಟಿಸಲಾಗುವುದು.
ಚಿತ್ರಗಾರ ರವಿ, ಗಣಪತಿ ಮೂರ್ತಿ ತಯಾರಕ, ಕಂಪ್ಲಿ
======
ಪಿಒಪಿ ಗಣಪತಿ ಮೂರ್ತಿಗಳ ನಿಯಂತ್ರಣಕ್ಕಾಗಿ ಪಟ್ಟಣದಲ್ಲಿ ಚೆಕ್‌ಪೋಸ್ಟ್ ರಚಿಸಿ ತಡೆಹಿಡಿಯಲಾಗುವುದು. ಪಿಒಪಿ ಗಣಪತಿ ಪ್ರತಿಷ್ಠಾಪನೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಾಸಾಯನಿಕವಲ್ಲದ, ಸಂಪೂರ್ಣ ಮಣ್ಣಿನ ಗಣಪತಿಗಳನ್ನೇ ಪ್ರತಿಷ್ಠಾಪಿಸಬೇಕು.
ಬಿ.ಮಲ್ಲಿಕಾರ್ಜುನ, ಪ್ರಭಾರ ಮುಖ್ಯಾಧಿಕಾರಿ, ಪುರಸಭೆ, ಕಂಪ್ಲಿ