ಕಂಪ್ಲಿ: ಬೇಸಿಗೆ ಬಿಸಿಲಿನ ಪ್ರಖರತೆಯಿಂದಾಗಿ ತಾಳೆಹಣ್ಣಿಗೆ ಬೇಡಿಕೆ ಹೆಚ್ಚಿದೆ. ಹಗರಿಬೊಮ್ಮನಹಳ್ಳಿ ಕಡೆಯಿಂದ ತಂದಿದ್ದ ತಾಳೆಹಣ್ಣನ್ನು ಪಟ್ಟಣದಲ್ಲಿ ಮಾರಾಟ ಮಾಡಲಾಗುತ್ತಿದೆ.
ತಾಲೂಕಿನ ರಾಮಸಾಗರ, ಬುಕ್ಕಸಾಗರ ಸೇರಿದಂತೆ ತುಂಗಭದ್ರಾ ನದಿಪಾತ್ರದಲ್ಲಿ ನೈಸರ್ಗಿಕವಾಗಿ ಬೆಳೆದ ತಾಳೆ ಮರಗಳಿಂದ ತಾಳೆಹಣ್ಣು ಸಂಗ್ರಹಿಸಲಾಗುತ್ತಿದೆ. ಬೇಸಿಗೆ ಆರಂಭವಾದರೂ ಬೆಳಗಿನ ಜಾವ ಇಬ್ಬನಿ ಬೀಳುತ್ತಿರುವುದರಿಂದ ತಾಳೆಹಣ್ಣಿನ ಇಳುವರಿ ಮೇಲೆ ಪರಿಣಾಮ ಬೀರಿದೆ. ಹಗರಿಬೊಮ್ಮನಹಳ್ಳಿಯಿಂದ ತರುತ್ತಿರುವುದರಿಂದ ಒಂದು ಹಣ್ಣನ್ನು 25 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ರಾಸಾಯನಿಕ ಸಿಂಪಡಣೆಯಿಲ್ಲದೆ ನೈಸರ್ಗಿಕವಾಗಿ ಬೆಳೆಯುವ ತಾಳೆಹಣ್ಣು ಔಷಧೀಯ ಗುಣ ಹೊಂದಿದೆ. ಆಟೋ, ಬಂಡಿ ಬಾಡಿಗೆ, ಸ್ಥಳದ ಜಕಾತಿ ಕಳೆದು ನಮಗೆ ದಿನಕ್ಕೆ 200ರಿಂದ 300 ರೂ. ಉಳಿಯುತ್ತದೆ ಎಂದು ಬುಕ್ಕಸಾಗರದ ಪ್ರಭು, ರಾಜಾ, ಮೈಲಾರಿ, ನಾಗರಾಜ, ಮಹೇಶ್, ರಾಜೇಶ್ ತಿಳಿಸಿದರು.
ತಾಳೆಹಣ್ಣು ನೈಸರ್ಗಿಕ ಬೆಳೆಯುವ ಕಾಡು ಜಾತಿಗೆ ಸೇರಿದ ಬೇಸಿಗೆ ಋತುಮಾನದ ಹಣ್ಣಾಗಿದೆ. ತಾಲೂಕಿನಲ್ಲಿ ನದಿ, ಕೆರೆ, ಹಳ್ಳದ ಬದಿಗೆ ನೈಸರ್ಗಿಕವಾಗಿ ಬೆಳೆದ ಸುಮಾರು 1500 ತಾಳೆ ಮರಗಳಿವೆ. ಔಷಧೀಯ ಗುಣದಿಂದಾಗಿ ಬೇಡಿಕೆ ಹೆಚ್ಚಿದೆ. | ಆರ್.ಜೆ.ಕರಿಗೌಡರ್ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಕಂಪ್ಲಿ