ಕಂಪ್ಲಿ ತಾಲೂಕಿನ ನಂ.2 ಮುದ್ದಾಪುರ ಗ್ರಾಮ ಬಳಿಯ ನಾರಿಹಳ್ಳ ಸೇತುವೆ ನಿರ್ಮಾಣ ಕಾಮಾಗಾರಿ ಅಪೂರ್ಣಗೊಂಡಿರುವುದು. 
ಜಿಲ್ಲೆ

ನಂ.2 ಮುದ್ದಾಪುರ ನಾರಿಹಳ್ಳಕ್ಕೆ ಬೇಕಿದೆ ಸೇತುವೆ - ಕಾಮಗಾರಿ ಅರೆಬರೆ ಸ್ಥಳೀಯರ ಪರದಾಟ

ಶ್ರೀನಾಥ

ಕಂಪ್ಲಿ: ತಾಲೂಕಿನ ನಂ.2 ಮುದ್ದಾಪುರ ಗ್ರಾಮದ ನಾರಿಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಂಡು ಒಂಬತ್ತು ವರ್ಷವಾದರೂ ಇನ್ನೂ ಅರೆಬರೆಯಾಗಿಯೇ ಇದೆ. ಇದರಿಂದ ಜನರು ಪರದಾಡುವಂತಾಗಿದೆ.

2018ರ ವಿಧಾನಸಭೆ ಚುನಾವಣೆಗೂ ಮುನ್ನ ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಸಂಸ್ಥೆಯ ಸೂಚನೆಯಂತೆ ಕರ್ನಾಟಕ ಲ್ಯಾಂಡ್ ಆರ್ಮಿ ಕಾರ್ಪೋರೇಷನ್ ನಂ.2 ಮುದ್ದಾಪುರ ಗ್ರಾಮದ ಬಳಿಯ ನಾರಿಹಳ್ಳಕ್ಕೆ ಎಮ್ಮಿಗನೂರು ಲಿಂಕ್ ಸೇತುವೆಯನ್ನು 18.68ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜಿಸಿತ್ತು.

ಆಗಿನ ಶಾಸಕರು, ನಿಗಮದ ಅಧಿಕಾರಿಗಳ ಮೌಖಿಕ ಒಪ್ಪಿಗೆ ಪಡೆದು ಗ್ರಾಮಸ್ಥರ ಅನುಕೂಲಕ್ಕಾಗಿ ಈ ಯೋಜನೆಯನ್ನು ಸಾಕಾರಗೊಳಿಸಲು ಅಂದಿನ ಗ್ರಾಪಂ ಅಧ್ಯಕ್ಷ ಕೆ.ಭಾಸ್ಕರರೆಡ್ಡಿ ಮುಂದಾಗಿ ಸೇತುವೆ ನಿರ್ಮಾಣಕ್ಕಾಗಿ ಹಣ ವ್ಯಯಿಸಿ ಸಿಮೆಂಟ್ ಬೀಮ್ ನಿರ್ಮಿಸಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಸೇತುವೆ ನಿರ್ಮಾಣಕ್ಕೆ ಮೌಖಿಕ ಒಪ್ಪಿಗೆ ನೀಡಿದ್ದ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಬದಲಾದ ರಾಜಕೀಯ ವಿದ್ಯಮಾನಗಳಿಂದಾಗಿ ಸೇತುವೆ ನಿರ್ಮಾಣಕ್ಕೆ ನಿಗಮದಿಂದಲೂ ಅಧಿಕೃತ ಒಪ್ಪಿಗೆ ದೊರಕಲಿಲ್ಲ.

ಹೀಗಾಗಿ ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಸೇತುವೆ ನಿರ್ಮಾಣಕ್ಕೆ ಮುಂದಾದ ಭಾಸ್ಕರರೆಡ್ಡಿ ಹಣ ಕಳೆದುಕಂಡರು. ಸೇತುವೆ ಪೂರ್ಣಗೊಳಿಸಲು ನಿಗಮವೂ ಉತ್ಸುಕತೆ ತೋರದಿದ್ದರಿಂದ ಸೇತುವೆ ಕಾಮಗಾರಿ ಅಪೂರ್ಣವಾಗಿದೆ.

ವಾಹನ ಸಂಚಾರಕ್ಕೆ ಅನನುಕೂಲ

ಟ್ರಾೃಕ್ಟರ್, ಎತ್ತಿನಗಾಡಿ, ಮೋಟರ್ ಸೈಕಲ್ ಮೊದಲಾದ ವಾಹನಗಳಲ್ಲಿ ಗೊಬ್ಬರ, ಸಸಿ, ಬಿತ್ತನೆ ಬೀಜ ಸೇರಿದಂತೆ ಕೃಷಿ ಪರಿಕರಗಳನ್ನು ಸಾಗಿಸಲು ಪರದಾಡಬೇಕಿದೆ. ಹೆಚ್ಚಿನ ಪ್ರಮಾಣದ ಮಳೆಯಾದಾಗ, ದರೋಜಿ ಕೆರೆಯಿಂದ ನಾರಿಹಳ್ಳಕ್ಕೆ ನೀರು ಹರಿದು ಬಂದಾಗ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ರೈತರು ಹೊಲ-ಗದ್ದೆಗಳಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಶಾಂತಿನಗರದ ಸೇತುವೆ ಬಳಸಿ 10ಕಿ.ಮೀ. ಸುತ್ತಿ ಸಂಚರಿಸಬೇಕಾಗುತ್ತದೆ. ಹೀಗಾಗಿ ನಂ.2 ಮುದ್ದಾಪುರ ನಾರಿಹಳ್ಳಕ್ಕೆ ಸೇತುವೆಯು ತೀರಾ ಅಗತ್ಯವಾಗಿದೆ.

=====

ರೈತರ ಅನುಕೂಲಕ್ಕಾಗಿ ಸೇತುವೆ ಕಾಮಗಾರಿ ಆರಂಭಿಸಿ ಆರ್ಥಿಕವಾಗಿ ನಷ್ಟ ಅನುಭವಿಸಿದ್ದೇನೆ. ನಾರಿಹಳ್ಳಕ್ಕೆ ಸೇತುವೆ ಅಗತ್ಯವಿದೆ. ಅರ್ಧಕ್ಕೆ ನಿಂತ ಸೇತುವೆಯನ್ನು ಪೂರ್ಣಗೊಳಿಸಬೇಕು. ಶಾಸಕ ಜೆ.ಎನ್.ಗಣೇಶ್ ಹಾಗೂ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಕೂಡಲೇ ಸೇತುವೆ ನಿರ್ಮಿಸುವಲ್ಲಿ ಶಾಸಕರು ಹಿತಾಸಕ್ತಿ ತೋರಬೇಕು.

> ಕೆ.ಭಾಸ್ಕರರೆಡ್ಡಿ, ಸಣಾಪುರ ಗ್ರಾಪಂ ಮಾಜಿ ಅಧ್ಯಕ್ಷ

=====

ನಂ.2 ಮುದ್ದಾಪುರ ನಾರಿಹಳ್ಳದ ಸೇತುವೆ ಕಾಮಗಾರಿ ಅಪೂರ್ಣಗೊಂಡಿರುವುದು ಗಮನಕ್ಕೆ ಬಂದಿದೆ. ಅದನ್ನು ಪೂರ್ಣಗೊಳಿಸಲು ತಕ್ಕ ಕ್ರಮವಹಿಸುತ್ತೇನೆ.

> ಜೆ.ಎನ್.ಗಣೇಶ್, ಶಾಸಕ, ಕಂಪ್ಲಿ