ನಂ.10ಮುದ್ದಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ರೈತ ಮಹಿಳೆಯರಿಗೆ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಕೆ.ಸೋಮಶೇಖರ್ ಮಾತನಾಡಿದರು. ಪ್ರಮುಖರಾದ ಸಂಜುಕುಮಾರ್, ಚನ್ನಬಸಯ್ಯಸ್ವಾಮಿ, ಬಿ.ಲಕ್ಷ್ಮೀ ಇದ್ದರು. 
ಜಿಲ್ಲೆ

ಸಾವಯವ ಕೃಷಿಗೆ ಆದ್ಯತೆ ಸಿಗಲಿ

ಪ್ರವೀಣ ಉದುಸಾ ದಲಬಂಜನ್

ಕಂಪ್ಲಿ: ನಂ.10 ಮುದ್ದಾಪುರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ರೈತ ಮಹಿಳೆಯರಿಗೆ ಕೃಷಿ ವಿಸ್ತರಣಾ ಕಾರ್ಯಕ್ರಮಗಳ ಯೋಜನೆ ಅಡಿಯಲ್ಲಿ ನೆಲ-ಜಲ ಸಂರಕ್ಷಣೆ, ಮಳೆ ನೀರು ಕೊಯ್ಲು ಹಾಗೂ ಕೃಷಿ ಇಲಾಖೆಯಿಂದ ಸಿಗುತ್ತಿರುವ ಸೌಲಭ್ಯಗಳ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ ಗುರುವಾರ ನಡೆಯಿತು.

ಟ್ರಸ್ಟ್‌ನ ಕೃಷಿ ಅಧಿಕಾರಿ ಸಂಜುಕುಮಾರ್ ತರಬೇತಿ ನೀಡಿ, ಮಣ್ಣಿನ ಆರೋಗ್ಯಕ್ಕೆ ಅನುಗುಣವಾಗಿ ರಾಸಾಯನಿಕ ಗೊಬ್ಬರ, ಬೀಜ ಬಿತ್ತನೆ, ನೀರು ಹಾಯಿಸುವಿಕೆ ಮೊದಲಾದ ಕೃಷಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ರಾಸಾಯನಿಕ ಗೊಬ್ಬರ ಬಳಕೆಯಿಂದ ವಿಮುಖರಾಗಿ ಸಾವಯವ ಹಾಗೂ ಯಂತ್ರಾಧಾರಿತ ಕೃಷಿಯತ್ತ ಮರಳಬೇಕಿದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆಯುವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.

ಕೃಷಿ ಅಧಿಕಾರಿ ಕೆ.ಸೋಮಶೇಖರ್ ಮಾತನಾಡಿ, ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ, ಯಂತ್ರೋಪಕರಣ ಸೇರಿ ನಾನಾ ಸೌಲಭ್ಯಗಳನ್ನು ಒದಗಿಸುತ್ತಿದ್ದು ರೈತರು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ನಂ.10 ಮುದ್ದಾಪುರ ಗ್ರಾಮದ ಪ್ರಮುಖ ಚನ್ನಬಸಯ್ಯಸ್ವಾಮಿ, ಒಕ್ಕೂಟದ ಉಪಾಧ್ಯಕ್ಷೆ ಬಿ.ಲಕ್ಷ್ಮೀ, ಸೇವಾ ಪ್ರತಿನಿಧಿ ಚೈತ್ರಾ, ಸ್ವ-ಸಹಾಯ ಸಂಘದ 65ಕ್ಕೂ ಹೆಚ್ಚು ಜನ ರೈತ ಮಹಿಳೆಯರು ಪಾಲ್ಗೊಂಡಿದ್ದರು.