ಕಂಪ್ಲಿ: ವೈಕುಂಠ ಏಕಾದಶಿಯಂದು ಉತ್ತರ ದ್ವಾರದಿಂದ ಶ್ರೀಮನ್ನಾರಾಯಣನ ದರ್ಶನದಿಂದ ಪುಣ್ಯಸಾಧನೆಯಾಗುತ್ತದೆ ಎಂದು ಇಲ್ಲಿನ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಹೇಳಿದರು.
ಪಟ್ಟಣದ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ವೈಕುಂಠ ಏಕಾದಶಿ ನಿಮಿತ್ತ ಶ್ರೀಮನ್ನಾರಾಯಣನನ್ನು ಪೂಜಿಸಿ, ಆಶೀರ್ವಚನ ನೀಡಿದರು. ವರ್ಷದಲ್ಲಿ 24ಏಕಾದಶಿಗಳು ಬರುತ್ತವೆ. ಈ ಪೈಕಿ ಆಷಾಢ ಶುದ್ಧ ಏಕಾದಶಿ, ಕಾರ್ತೀಕ ಶುದ್ಧ ಏಕಾದಶಿ, ಪುಷ್ಯ ಶುದ್ಧ ಏಕಾದಶಿ ಪವಿತ್ರವಾದವು. ವೈಕುಂಠ ಏಕಾದಶಿಯಂದು ವೈಕುಂಠದ ಬಾಗಿಲು ತೆರೆದಿದ್ದು ದೇವತೆಗಳು ನಾರಾಯಣನ ದರ್ಶನ ಪಡೆಯುತ್ತಾರೆಂದು ಪುರಾಣಗಳಲ್ಲಿ ಪ್ರತೀತಿಯಿದೆ. ವೈಕುಂಠ ಏಕಾದಶಿಯಂದು ಉತ್ತರ ಬಾಗಿಲ ಮೂಲಕ ನಾರಾಯಣದ ದರ್ಶನ ಪಡೆದಲ್ಲಿ ಮೋಕ್ಷಗಳಿಸಲು ಸಾಧ್ಯ ಎಂದರು.
ವೈಕುಂಠ ಏಕಾದಶಿ ನಿಮಿತ್ತ ಶ್ರೀಮನ್ನಾರಾಯಣ ಪ್ರತಿಮೆಯನ್ನು ಫಲಪುಷ್ಪಾದಿಗಳಿಂದ ಅಲಂಕರಿಸಲಾಗಿತ್ತು. ಪಂಚಾಮೃತ ಸಹಿತ 108 ಕಲಶಾಭಿಷೇಕ, ಸಹಸ್ರನಾಮಾರ್ಚನೆಯೊಂದಿಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಪ್ರಸಾದ ಸೇವೆಸಲ್ಲಿಸಿದ ಆಂಧ್ರಮೇಸ್ತ್ರಿ ವೆಂಕಟೇಶಲು, ಟಿ.ವಿ.ಸುದರ್ಶನರೆಡ್ಡಿ ಇತರರು ಇದ್ದರು.